ಬಹುಕೋಟಿ ರೂಪಾಯಿ ವಂಚಕ ರೋಶನ್‌ ಸಲ್ಡಾನನ ವಿರುದ್ಧ ಸಿಐಡಿ ತನಿಖೆ

ಮೋಸ ಹೋದ ಹಲವು ಉದ್ಯಮಿಗಳಿಂದ ದೂರು ದಾಖಲು

ಮಂಗಳೂರು : ಕಂಕನಾಡಿ ಬೊಳ್ಳಗುಡ್ಡೆ ನಿವಾಸಿ ಬಹುಕೋಟಿ ರೂಪಾಯಿ ವಂಚಕ ರೋಶನ್ ಸಲ್ಡಾನನಿಂದ ವಂಚನೆಗೊಳಗಾದ ಒಬ್ಬೊಬ್ಬರೇ ಈಗ ದೂರು ನೀಡಲು ಮುಂದಾಗುತ್ತಿದ್ದಾರೆ. ಬಿಹಾರ ಮೂಲದ ಉದ್ಯಮಿಯೊಬ್ಬರಿಗೆ ಸಲ್ಡಾನ ಭೂ ಖರೀದಿಸಿಕೊಡುವುದಾಗಿ ನಂಬಿಸಿ 10 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಸೆನ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ವಂಚನೆಯ ಮೊತ್ತ 10 ಕೋ.ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ ಸಿಐಡಿ ತನಿಖೆಗೆ ಒಪ್ಪಿಸಲು ಅವಕಾಶವಿದೆ. ಅದರಂತೆ ಈ ವಂಚನೆ ಪ್ರಕರಣವನ್ನು ಸಿಐಡಿಗೊಪ್ಪಿಸಿರುವುದಾಗಿ ಮಂಗಳೂರು ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ.





















































 
 

ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ತನಗೆ ರೋಶನ್ ಸಲ್ಡಾನ 1 ಕೋ.ರೂ. ವಂಚನೆ ಮಾಡಿರುವುದಾಗಿ ಸೋಮವಾರ ದೂರು ನೀಡಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ಉದ್ಯಮಿಯೊಬ್ಬರು ರೂ 5 ಕೋಟಿ ಹಣವನ್ನು ಜು.16ರಂದು ಮತ್ತು ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ರೂ ಹಣವನ್ನು ಜು.21ರಂದು ಬ್ಯಾಂಕ್ ಮೂಲಕ ಆರೋಪಿಯ ಖಾತೆಗೆ ವರ್ಗಾಯಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಂಧ್ರ ಮೂಲದ ಉದ್ಯಮಿಗೆ 40 ಕೋಟಿ ವಂಚಿಸಿರುವ ಬಗ್ಗೆ ಆರೋಪಿ ವಿರುದ್ಧ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗೆ ಸಲ್ಡಾನನ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ನಾಳೆ ಪೊಲೀಸ್‌ ಕಸ್ಟಡಿಗೆ

ಪ್ರಸ್ತುತ ಸಲ್ಡಾನ ನ್ಯಾಯಾಂಗ ಬಂಧನದಲ್ಲಿದ್ದು, ನಾಳೆ ಪೊಲೀಸರು ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ. ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದ್ದು, ಜು.23ರಂದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಆರೋಪಿಯ ಇನ್ನಷ್ಟು ಬ್ಯಾಂಕ್ ಖಾತೆಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈಗಾಗಲೇ 50 ಕೋ.ರೂ. ಹೆಚ್ಚು ವಹಿವಾಟು ನಡೆದಿರುವುದು ಪತ್ತೆಯಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆಸಲಾದ ಮಹತ್ವದ ಕಾರ್ಯಾಚರಣೆಯಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ 200 ಕೋಟಿ ರೂ.ಗೂ ಅಧಿಕ ವಂಚನೆ ನಡೆಸಿದ ಆರೋಪದಲ್ಲಿ ರೋಶನ್ ಸಲ್ಡಾನನನ್ನು ಬಂಧಿಸಲಾಗಿದೆ. ಆರೋಪಿಯ ಮನೆಯಿಂದ ಪೊಲೀಸರು 667 ಗ್ರಾಂ ಚಿನ್ನಾಭರಣ, 2.75 ಕೋಟಿ ರೂ. ಮೌಲ್ಯದ ವಜ್ರದ ಆಭರಣ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947 ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ, ಮಹತ್ವದ ದಾಖಲೆಗಳು ಮತ್ತು ಖಾಲಿ ಚೆಕ್‌ಗಳನ್ನು ವಶಪಡಿಸಿಕೊಂಡಿದ್ದರು.

error: Content is protected !!
Scroll to Top