ಬೀರಮಲೆ ಬೆಟ್ಟದಲ್ಲಿ ಸಾರ್ವಜನಿಕ ಅನುಚಿತ ವರ್ತನೆ :  ಪ್ರಕರಣದ ಆರೋಪಿಗಳಿಗೆ ಜಾಮೀನು

ಪುತ್ತೂರು: ಇತ್ತೀಚೆಗೆ ಬೀರಮಲೆ ಬೆಟ್ಟದ ಗಾಂಧಿ ಮಂಟಪದಲ್ಲಿ ಯುವಕ-ಯುವತಿ ಜೋಡಿಯೊಂದು ಬೈಕ್ ಒಂದರಲ್ಲಿ ಬಂದು ಮಾತುಕತೆ ನಡೆಸುತ್ತಿದ್ದ ಸಂದರ್ಭ ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದರು ಎಂಬ ಕಾರಣಕ್ಕಾಗಿ ಅವರನ್ನು ಅಸಮರ್ಪಕವಾಗಿ ವಿಚಾರಿಸಿ, ನಿಂದಿಸಿ ಅವರಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ  ಹರಿಯಬಿಡುವುದಾಗಿ ಬೆದರಿಸಿದ ಪ್ರಕರಣ ನಡೆದಿತ್ತು. ಈ ಸಂಬಂಧ ಆರೋಪಿಗಳಾದ ರಾಮಚಂದ್ರ ಹಾಗೂ ಪುರುಷೋತ್ತಮ ಎಂಬವರನ್ನು ಬಂಧಿಸಿದ್ದರ ವಿರುದ್ಧ ದಾವೆ ಹೂಡಲಾಗಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

 ಆರೋಪಿಗಳು ಆ ಜೋಡಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪೊಲೀಸರು ಬಂಧನದ ನೋಟಿಸ್ ನೀಡದೆ ಆರೋಪಿಗಳನ್ನು  ಬಂಧಿಸಿರುವುದನ್ನು ಅಸಮರ್ಪಕ ಎಂದು ಪರಿಗಣಿಸಿದ ಮಾನ್ಯ ನ್ಯಾಯಾಲಯವು ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಸದ್ರಿ ಪ್ರಕರಣದಲ್ಲಿ ಪೊಲೀಸರು ಆನಂತರ ಆರೋಪಿಗಳನ್ನು ಪುನಃ ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಯನ್ನು ಮನಗಂಡ ನ್ಯಾಯಾಲಯವು ಆರೋಪಿಗಳ ಮನವಿಯಂತೆ  ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿಯವರಾದ  ಅನಿಕೇತನ ಲಾ ಛೇಂಬರ್ಸ್’ನ ಕೃಷ್ಣ ಪ್ರಸಾದ್ ನಡ್ಸಾರ್ ಹಾಗೂ H & D Legalನ ದೀಪಕ್ ಬೊಳ್ವಾರು ವಾದಿಸಿದ್ದರು.





















































 
 
error: Content is protected !!
Scroll to Top