ಪುತ್ತೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಅವರು ಇಂದು ಉಪ್ಪಿನಂಗಡಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇವರಿಗೆ 92 ವರ್ಷಗಳಾಗಿತ್ತು. ತೆಂಕು ಮತ್ತು ಬಡಗುತಿಟ್ಟುಗಳೆರಡರಲ್ಲೂ ಅಗ್ರಮಾನ್ಯ ವೇಷಗಳನ್ನು ಮಾಡಿ ಹೆಸರುವಾಸಿಯಾದವರು.
ಮುಲ್ಕಿ, ಸೌಕೂರು, ಸುರತ್ಕಲ್ ಮೇಳಗಳು, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ನಡೆಸಿದ್ದರು.
ಬೇಲೂರಿನ ಶಿಲಾ ಬಾಲಿಕೆಯರ ಅಂಗಭಂಗಿಗಳನ್ನು ಬೇಲೂರಿಗೆ ಹೋಗಿ ಸ್ವತಃ ಅಭ್ಯಸಿಸಿ ಯಕ್ಷಗಾನದಲ್ಲಿ ಅಳವಡಿಸಿದವರು. ಇವರ ತಂದೆ ಪುತ್ತೂರಿನ ಸಮೀಪದ ಬೈಪದವಿನ ರಾಮ ಭಟ್ಟ, ತಾಯಿ ಹೇಮಾವತಿ. ಪತ್ನಿ ಪರಮೇಶ್ವರಿ. ಪಾತಾಳರಿಗೆ ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು. ಹಿರಿಯ ಮಗ ಅಂಬಾಪ್ರಸಾದ ಪಾತಾಳ ಯಕ್ಷರಂಗದ ಪ್ರಸಿದ್ಧ ಸ್ತ್ರೀ ವೇಷಧಾರಿ.
ಇವರ ಕಲಾ ಪ್ರೌಢಿಮೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿದ್ದು, ಅದರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಡೋಗ್ರಾ ಪೂಜಾರಿ ಪ್ರಶಸ್ತಿಗಳು ಸೇರಿವೆ.
























