ತೆಲುಗಿನ ಖ್ಯಾತ ನಟ ಫಿಶ್‌ ವೆಂಕಟ್‌ ನಿಧನ

ಎಲ್ಲ ಸ್ಟಾರ್‌ ನಟರೊಂದಿಗೆ ಅಭಿನಯಿಸಿದ್ದ ಹಾಸ್ಯ ನಟ

ಹೈದರಾಬಾದ್: ಕೋಟ ಶ್ರೀನಿವಾಸ್ ರಾವ್ ನಿಧನ ಬೆನ್ನಲ್ಲೇ ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ಹಾಸ್ಯ ನಟ ಫಿಶ್ ವೆಂಕಟ್ (53) ಶನಿವಾರ ನಿಧನರಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಫಿಶ್ ವೆಂಕಟ್ ಅನಾರೋಗ್ಯದ ಕಾರಣದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಫಿಶ್ ವೆಂಕಟ್ ಟಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ಖಳ ನಟನಾಗಿ, ಹಾಸ್ಯ ನಟನಾಗಿ ನಟಿಸಿದ್ದರು. ಅನಾರೋಗ್ಯ ಕಾರಣದಿಂದಾಗಿ ಕಳೆದ ಕೆಲವು ಕಾಲದಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಫಿಶ್ ವೆಂಕಟ್ ಎರಡೂ ಮೂತ್ರಪಿಂಡಗಳು ಹಾಳಾದ ಕಾರಣ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಕೆಲ ದಿನಗಳ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿತ್ತು. ಆದರೆ, ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.





















































 
 

ಆರ್ಥಿಕ ಸಹಾಯ ಮಾಡುವಂತೆ ಚಿತ್ರರಂಗ ಮತ್ತು ಸರ್ಕಾರಕ್ಕೆ ಕುಟುಂಬ ಸದಸ್ಯರು ಮನವಿ ಮಾಡಿದ್ದರು. ಅನೇಕರು ನೆರವಿನ ಹಸ್ತ ಚಾಚಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಫಿಶ್‌ ವೆಂಕಟ್‌ ನಿಧನಕ್ಕೆ ಅವರ ಆಪ್ತರು ಮತ್ತು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

2000ರಲ್ಲಿ ʼಸಮ್ಮಕ್ಕ ಸಾರಕ್ಕʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಫಿಶ್ ವೆಂಕಟ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲ ಸ್ಟಾರ್ ಹೀರೊಗಳೊಂದಿಗೆ ತೆರೆ ಹಂಚಿಕೊಂಡಿದ್ದರು. ಹೈದರಾಬಾದ್‌ನಲ್ಲಿ ಜನಿಸಿದ ಅವರು 2000ರ ದಶಕದ ಆರಂಭದಲ್ಲಿ ʼಖುಷಿʼ ಚಿತ್ರದ ಮೂಲಕ ಉತ್ತಮ ಹೆಸರು ಮಾಡಿದ್ದರು. ಆದಿ, ಬನ್ನಿ, ಅದುರ್ಸ್, ಗಬ್ಬರ್ ಸಿಂಗ್ ಮತ್ತು ಡಿಜೆ, ಟಿಲ್ಲು ಮುಂತಾದ ಹಲವಾರು ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಫಿಶ್ ವೆಂಕಟ್ ಇತ್ತೀಚಿನ ಚಿತ್ರಗಳಾದ ಸ್ಲಮ್ ಡಾಗ್ ಹಸ್ಬೆಂಡ್, ನರಕಾಸುರ ಮತ್ತು ಕಾಫಿ ವಿತ್ ಎ ಕಿಲ್ಲರ್‌ನಲ್ಲಿ ನಟಿಸಿದ್ದರು.

error: Content is protected !!
Scroll to Top