ಈತನ ಭವ್ಯ ಬಂಗಲೆ, ವಿದೇಶಿ ಹುಡುಗಿಯರು, ಶರಾಬು ಬಾಟಲಿಗಳನ್ನು ನೋಡಿಯೇ ಬಲೆಗೆ ಬೀಳುತ್ತಿದ್ದರು ಉದ್ಯಮಿಗಳು
ಮಂಗಳೂರು: ಸಾಲ, ಜಾಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಗಳಿಗೆ ಕೋಟಿಗಟ್ಟಲೆ ವಂಚಿಸಿರುವ ಮಂಗಳೂರಿನ ರೋಷನ್ ಸಲ್ಡಾನನ (43) ವಂಚನಾ ಜಾಲ ಮುಂಬಯಿ, ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೋಲ್ಕತ್ತಾ, ಸಾಂಗ್ಲಿ, ಲಖನೌ, ಬಾಗಲಕೋಟೆ ಮತ್ತಿತರೆಡೆ ಹರಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಚಿತ್ರದುರ್ಗ ಮತ್ತು ಮುಂಬೈಯಲ್ಲಿ ಅವನ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಆರೋಪಿ ರೋಷನ್ ಸಲ್ಡಾನ ತಾನು ಉದ್ಯಮಿಯೆಂದು ಬಿಂಬಿಸಿ ಹೊರರಾಜ್ಯ, ಹೊರಜಿಲ್ಲೆಯಲ್ಲಿರುವ ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ಜಾಗದ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಕೆ ಗಳಿಸುತ್ತಿದ್ದ. ದೇಶದ ಪ್ರಮುಖ ನಗರಗಳಲ್ಲಿ ತನ್ನ ವಂಚನೆಗಾಗಿ ಏಜೆಂಟರ್‌ಗಳನ್ನು ಇರಿಸಿದ್ದ. ಅವರ ಮೂಲಕ ಡೀಲ್ ಕುದುರಿಸಲು ಮಂಗಳೂರಿನ ತನ್ನ ಐಷಾರಾಮಿ ಮನೆಗೆ ಕರೆಸುತ್ತಿದ್ದ. ತಾನೊಬ್ಬ ಆಗರ್ಭ ಶ್ರೀಮಂತ ಎಂಬ ರೀತಿ ಪೋಸ್ ಕೊಡುತ್ತಿದ್ದ. ಮನೆಯಲ್ಲಿನ ಚಿನ್ನ, ಬಣ್ಣದ ಚಿತ್ತಾರ, ಎಲ್ಲಿ ನೋಡಿದರೂ ವಿದೇಶಿ ಮದ್ಯಗಳು, ಮಲೇಶಿಯನ್ ಹುಡುಗಿಯರು ಎಲ್ಲವನ್ನೂ ಮನೆಗೆ ಬಂದ ಉದ್ಯಮಿಗಳಿಗೆ ನೀಡುತ್ತಿದ್ದ. ಐಷಾರಾಮಿ ಮನೆ, ಅಲ್ಲಿನ ಆತಿಥ್ಯ ನೋಡಿಯೇ ಉದ್ಯಮಿಗಳು ಖೆಡ್ಡಾಕ್ಕೆ ಬೀಳುತ್ತಿದ್ದರು.
ಮೊದಲ ಸುತ್ತಿನ ಮಾತುಕತೆ ಬಳಿಕ ಉದ್ಯಮಿಗಳನ್ನು ತನ್ನ ವಂಚನಾ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ. ಉದ್ಯಮಿಗಳ ಒಪ್ಪಿಗೆಯ ನಂತರ 50 ರಿಂದ 100 ಕೋಟಿ ರೂ. ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಹಣ ನೀಡುವಂತೆ ಕೇಳುತ್ತಿದ್ದ. ಆತನ ಬಣ್ಣದ ಮಾತಿಗೆ ಮರುಳಾಗಿ ಉದ್ಯಮಿಗಳು ಹಿಂದೆ-ಮುಂದೆ ನೋಡದೆ ಕೋಟ್ಯಂತರ ರೂ. ಹಣವನ್ನು ನಗದು ರೂಪದಲ್ಲಿ ನೀಡುತ್ತಿದ್ದರು.
ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ನಾನಾ ಕಾರಣ ಹೇಳಿ ಮೊಬೈಲ್ ಸ್ವಿಚ್‌ಆಫ್ ಮಾಡಿ ಎಸ್ಕೇಪ್ ಆಗುತ್ತಿದ್ದ. ಹೀಗೆ ಈತನಿಂದ ವಂಚನೆಗೊಳಗಾದ ಇಬ್ಬರು ದೂರು ದಾಖಲಿಸಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಆರೋಪಿಯನ್ನು ಬಂಧಿಸಿದ್ದಾರೆ. ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವಂಚಿಸಿದ್ದು, ಈವರೆಗೂ 200 ಕೋಟಿ ರೂ. ಅಧಿಕ ಹಣವನ್ನು ವಂಚಿಸಿರುವುದು ಬಯಲಾಗಿದೆ.
ಪೊಲೀಸ್ ದಾಳಿಯ ಸಮಯದಲ್ಲಿ ಅಧಿಕಾರಿಗಳು ಅಪರಾಧದ ದಾಖಲೆಗಳು, ಖಾಲಿ ಚೆಕ್‌ಗಳು, 667 ಗ್ರಾಂ ಚಿನ್ನದ ಆಭರಣಗಳು ಮತ್ತು 2.75 ಕೋಟಿ ರೂ. ಮೌಲ್ಯದ ವಜ್ರದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. 6,72,947 ರೂ. ಮೌಲ್ಯದ ದೇಶಿಯ ಮತ್ತು ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಬೇರೆ ಬೇರೆ ಕಡೆಗಳಲ್ಲಿ ಉದ್ಯಮ ನಡೆಸುತ್ತಿದ್ದು, ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ದ. ಹೆಂಡತಿ ಹಾಗೂ ಮಗುವಿನೊಂದಿಗೆ ಚೆನ್ನೈನಲ್ಲಿ ವಾಸವಾಗಿದ್ದ ಈತ, ಹೆಂಡತಿಯ ಹೆಸರಿನಲ್ಲೂ ಹಲವು ಉದ್ಯಮ ನಡೆಸುತ್ತಿದ್ದ ಎನ್ನುವುದು ಪತ್ತೆಯಾಗಿದೆ.
























