ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ

ಬಂಗಲೆಯಲ್ಲಿದ್ದ ವಿದೇಶಿ ಯುವತಿಯೂ ಪೊಲೀಸರ ವಶ

ಯಾವುದೇ ಬಾಲಿವುಡ್‌ ಸಿನೆಮಾ ಸೆಟ್‌ಗಿಂತಲೂ ಅದ್ದೂರಿಯಾಗಿದೆ ಮಂಗಳೂರಿನ ಈ ವಂಚಕನ ಬಂಗಲೆ

ಮಂಗಳೂರು : ಮನೆಯೆಂದರೆ ಅದು ಮನೆಯಲ್ಲ ಭವ್ಯವಾದ ಬಂಗಲೆ. ಒಳಗಿದೆ ಯಾವುದೇ ಫೈವ್‌ಸ್ಟಾರ್‌ ಹೋಟೆಲನ್ನು ನಾಚಿಸುವಂಥ ಐಷಾರಾಮಿ ವ್ಯವಸ್ಥೆ. ಎರಡು ಮೂರು ಅಡಗುತಾಣಗಳು, ಅಲ್ಲಲ್ಲಿ ಸಿಸಿ ಕ್ಯಾಮೆರಗಳು. ರೂಮ್‌ಗಳಲ್ಲಿ ಗೋಡೆಗಳಿದ್ದರೂ ಅವುಗಳು ಕೆಲವೊಮ್ಮೆ ರಹಸ್ಯ ಕೋಣೆಗಳ ಬಾಗಿಲುಗಳೂ ಆಗುತ್ತವೆ.
ಕಬೋರ್ಡ್‌ಗಳ ರೀತಿ ಕಾಣುವುದನ್ನು ತಟ್ಟಿದರೆ ಅದು ಇನ್ನೊಂದು ನಿಗೂಢ ಕೋಣೆಯತ್ತ ಸಾಗುವ ಮೆಟ್ಟಿಲುಗಳನ್ನು ತೋರಿಸುತ್ತವೆ. ಮನೆಯ ಗೇಟ್‌ ತೆರೆದುಕೊಳ್ಳುವ ರಿಮೋಟ್‌ ಕಂಟ್ರೋಲ್‌ ಮೂಲಕ. ಮನೆಯಲ್ಲಿರುವ ಒಂದೊಂದು ಪೀಠೋಪಕರಣ 3-4 ಲಕ್ಷ ರೂ ಬೆಲೆಯದ್ದು, ಅಲಂಕಾರಿಕ ಗಿಡಗಳು ವಿದೇಶಗಳಿಂದ ತರಿಸಿದ್ದು, ಮನೆಯ ಕಪಾಟಿನಲ್ಲಿರುವ ಶಾಂಪೇನ್, ವಿಸ್ಕಿ ಬಾಟಲಿಗಳ ಬೆಲೆ ಕೇಳಿದರೆ ತಲೆ ತಿರುಗುತ್ತದೆ.





















































 
 

ಇದೇನು ಒಳ್ಳೆ ಕ್ರೈಂ ಥ್ರಿಲ್ಲರ್‌ ಸಿನೆಮಾ ಸೆಟ್‌ ಎಂದುಕೊಂಡರೆ ನಿಮ್ಮ ಎಣಿಕೆ ತಪ್ಪು. ಇದು ನಿನ್ನೆ ಮಂಗಳೂರು ಪೊಲೀಸರು ಪತ್ತೆ ಹಚ್ಚಿದ ವಂಚಕ ಉದ್ಯಮಿಯೊಬ್ಬನ ಮನೆಯೊಳಗೆ ಕಂಡುಬಂದ ಅಚ್ಚರಿಗಳು. ದೊಡ್ಡ ದೊಡ್ಡ ಕುಳಗಳಿಗೆ ಕೋಟಿಗಟ್ಟಲೆ ವಂಚಿಸುತ್ತಿದ್ದ ಈ ಉದ್ಯಮಿ ಮಂಗಳೂರಿನ ಕಟ್ಟಿಸಿದ್ದ ಈ ಭವ್ಯ ಬಂಗಲೆ ಯಾವುದೇ ಬಾಲಿವುಡ್‌ ಸಿನೆಮಾ ಸೆಟ್‌ಗಿಂತಲೂ ಅದ್ಭುತವಾಗಿತ್ತು. ಮನೆಯನ್ನು ನೋಡಿ ಪೊಲೀಸರೇ ದಂಗು ಬಡಿದು ಹೋಗಿದ್ದಾರೆ.

ವಂಚನೆ ಕೇಸಲ್ಲಿ ಉದ್ಯಮಿ, ಅವನ ಸಹಚರ ಹಾಗೂ ಓರ್ವ ವಿದೇಶಿ ಯುವತಿಯನ್ನು ಈ ಮನೆಯಿಂದ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಸದ್ಯಕ್ಕೆ ಆತ ಸುಮಾರು 200 ಕೋಟಿ ರೂಪಾಯಿ ವಂಚಿಸಿರುವುದು ಪತ್ತೆಯಾಗಿದೆ. ತನಿಖೆ ಮುಂದುವರಿದಿದ್ದು, ವಂಚನೆ ಪ್ರಮಾಣ ಕಡಿಮೆ ಎಂದರೂ 400-500 ಕೋಟಿಯಷ್ಟಾಗಬಹುದು ಎನ್ನಲಾಗುತ್ತಿದೆ.

ಮಂಗಳೂರಿನ ಜಪ್ಪಿನಮೊಗರು ನಿವಾಸಿ ರೋಶನ್ ಸಲ್ದಾನ(45) ಬಂಧಿತ ಆರೋಪಿ. ಈತನನ್ನು ಗುರುವಾರ ರಾತ್ರಿ ಮಂಗಳೂರು ಪೊಲೀಸ್‌ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಬಂಧಿಸಿದೆ.

ರೋಹನ್ ಸಲ್ದಾನ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಮೋಸದ ಬಲೆಗೆ ಬೀಳಿಸುತ್ತಿದ್ದ ಆರೋಪಿ ತನ್ನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ನಡೆಸುತ್ತಿದ್ದ. ಈತ 5ರಿಂದ 100 ಕೋಟಿ ರೂ.ವರೆಗೆ ಕಮಿಷನ್‌ ಮೇಲೆ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭಿಕ ಮಾತುಕತೆ ಬಳಿಕ ಉದ್ಯಮಿಗಳಿಂದ 50-100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ವ್ಯವಹಾರಕ್ಕೆ 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಹಣ ಪಡೆದು ವ್ಯವಹಾರ ನಡೆಸಿ ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ನಾನಾ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೋಸ ಹೋದ ಯಾರಾದರೂ ತನ್ನನ್ನು ಹುಡುಕಿಕೊಂಡು ಬಂದರೆ ಸಿಸಿಟಿವಿಯಲ್ಲಿ ದೂರದಿಂದಲೇ ನೋಡಿ ಮನೆಯೊಳಗಿನ ಅಡಗುತಾಣ ಸೇರಿಕೊಳ್ಳುತ್ತಿದ್ದ. ಕೆಲಸದಾಳುಗಳು ಯಜಮಾನ ಮನೆಯಲ್ಲಿಲ್ಲ ಎಂದು ಹೇಳಿ ಅವರನ್ನು ಸಾಗಹಾಕುತ್ತಿದ್ದರು.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಈತನ ವಿರುದ್ಧ ಎರಡು ವಂಚನೆ ಪ್ರಕರಣ ದಾಖಲಾಗಿದ್‌ದವು. ಇದರ ಬೆನ್ನುಹತ್ತಿದ ಪೊಲೀಸರಿಗೆ ಈ ಹೈಕ್ಲಾಸ್‌ ವಂಚಕನ ಸುಳಿವು ಸಿಕ್ಕಿದೆ. 3 ತಿಂಗಳಲ್ಲಿ 45 ಕೋಟಿ ವ್ಯವಹಾರ ನಡೆದಿರುವುದು ಪೊಲೀಸರ ಅನುಮಾನವನ್ನು ಹೆಚ್ಚಿಸಿತ್ತು. ನಿನ್ನೆ ರಾತ್ರಿ ಪೊಲೀಸರು ದಾಳಿ ಮಾಡಿದಾಗ ಈತ ಮನೆಯಲ್ಲಿ ಆರಾಮವಾಗಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ. ಮನೆಯಲ್ಲಿ ಕೆಲದಾಳುಗಳೂ ಇದ್ದರು. ಓಡಿ ಹೋಗಲೆತ್ನಿಸಿದ್ದ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಈತನ ಬಣ್ಣದ ಮಾತು, ಐಷರಾಮಿ ಜೀವನಶೈಲಿ, ಠಾಕುಠೀಕು ವರ್ತನೆ ನೋಡಿ ಉದ್ಯಮಿಗಳು ಸುಲಭವಾಗಿ ಬಲೆಗೆ ಬೀಳುತ್ತಿದ್ದರು. ಕಡಿಮೆ ಬೆಲೆಗೆ ಜಾಗ ಸಿಗುತ್ತದೆ, ಸುಲಭವಾಗಿ ಸಾಲ ಸಿಗುತ್ತದೆ ಎಂದು ನಂಬಿ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದರು. ಸದ್ಯಕ್ಕೆ ಈತನ ವಿರುದ್ಧ ಎರಡು ಪ್ರಕರಣಗಳು ಮಾತ್ರ ದಾಖಲಾಗಿವೆ. ಮೋಸ ಹೋದವರು ಬಂದು ದೂರು ದಾಖಲಿಸಬೇಕೆಂದು ಪೊಲೀಸರು ವಿನಂತಿ ಮಾಡಿದ್ದಾರೆ.

error: Content is protected !!
Scroll to Top