ಸುರ್ಜೆವಾಲಾ ಕರ್ನಾಟಕದ ಸೂಪರ್‌ ಸಿಎಂ: ಬಿಜೆಪಿ-ಜೆಡಿಎಸ್‌ ಟೀಕೆ

ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ ಎಂದು ವ್ಯಂಗ್ಯ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಪದೇ ಪದೆ ಬಂದು ಶಾಸಕರ, ಸಚಿವರ ಸಭೆ ನಡೆಸುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್‌ ಟೀಕಿಸಿವೆ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಸುರ್ಜೆವಾಲಾ ಸೂಪರ್‌ ಸಿಎಂ ಆಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ @rssurjewala ಅವರಿಗೆ ಅಭಿನಂದನೆಗಳು, ಚುನಾಯಿತ ಮುಖ್ಯಮಂತ್ರಿಗಳು ಸರ್ಕಾರ ನಡೆಸಲು ಅವರಿಗೆ ಜಿಪಿಎ ನೀಡಿದ್ದಾರೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ ಎಂದೆಲ್ಲ ಬಿಜೆಪಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದೆ.





















































 
 

ರಾಜ್ಯದಲ್ಲಿ ರಣದೀಪ್ ಸುರ್ಜೆವಾಲಾ ಆಡಳಿತ ಜಾರಿಯಾಗಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಲಾಟರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡು ಕರ್ನಾಟಕದಲ್ಲಿ ರಣದೀಪ್ ಆಡಳಿತ ಹೇರಿದೆ, ಸಂಪುಟ ಸಭೆಯೂ ಸುರ್ಜೇವಾಲಾ ಅಧ್ಯಕ್ಷತೆಯಲ್ಲಿ ನಡೆಯುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ ಅತೃಪ್ತ ಶಾಸಕರು ದೂರು ದುಮ್ಮಾನ ಕೇಳುತ್ತಿರುವ, ಮಂತ್ರಿಗಳ ಸಾಧನೆ ಪರಾಮರ್ಶೆ ಮಾಡುತ್ತಿರುವ ಸುರ್ಜೇವಾಲ ಅವರು ವಿಧಾನಸೌಧದಲ್ಲಿ ನಡೆಯುವ ಸಂಪುಟ ಸಭೆಗೆ ಬಂದು ತಾವೇ ಅಧ್ಯಕ್ಷತೆ ವಹಿಸಿದ್ದರೂ ಅಚ್ಚರಿಪಡಬೇಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತವಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ. ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಆಗಿ ನೇಮಕ ಮಾಡಲು ರಾಹುಲ್‌ ಗಾಂಧಿಗೂ ಶಕ್ತಿ ಇಲ್ಲ ಎಂದು ಟೀಕಿಸಿದ್ದಾರೆ. ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನವನ್ನ ಸಮರ್ಥವಾಗಿ ನಿಭಾಯಿಸಬಲ್ಲ ಒಬ್ಬ ನಾಯಕನೂ ಇಲ್ಲದೆ ಕಾಂಗ್ರೆಸ್ ಹೈಕಮಾಂಡ್ ತ್ರಿಶಂಕು ಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಸುರ್ಜೇವಾಲಾ ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಸುರ್ಜೇವಾಲ ಅಭಿನಂದನೆಗಳು. ಚುನಾಯಿತ ಮುಖ್ಯಮಂತ್ರಿಗಳು ಸರ್ಕಾರ ನಡೆಸಲು ಅವರಿಗೆ ಜಿಪಿಎ ನೀಡಿದ್ದಾರೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ. ಸಿದ್ದರಾಮಯ್ಯ ಹೊರಹೋಗುತ್ತಿದ್ದಾರೆ, ಡಿ.ಕೆ ಶಿವಕುಮಾರ್ ಅವರು ಕುರ್ಚಿಗಾಗಿ ಕಾಯುತ್ತಿದಾರೆ, ಆದರೆ ಸುರ್ಜೇವಾಲ ಈಗಾಗಲೇ ಆಡಳಿತ ನಡೆಸುತ್ತಿದ್ದಾರೆ. ಪಕ್ಷ ಕರ್ನಾಟಕವನ್ನು ಕೈಗೊಂಬೆ ರಾಜ್ಯವನ್ನಾಗಿ ಮಾಡಿಕೊಂಡು ಒಕ್ಕೂಟ ವ್ಯವಸ್ಥೆಯ ಮತ್ತು ಪ್ರಜಾಪ್ರಭುತ್ವವನ್ನು ಅಣಕ ಮಾಡುತ್ತಿದೆ ಎಂದಿದ್ದಾರೆ.

error: Content is protected !!
Scroll to Top