900 ರೂಪಾಯಿಯ ಮೀಟರ್‌ಗೆ ಗ್ರಾಹಕರಿಂದ 9,000 ರೂ. ವಸೂಲು ಮಾಡಿ ಲೂಟಿ
ಬೆಂಗಳೂರು : ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಬಿಜೆಪಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಬಿಜೆಪಿ ದೂರು ನೀಡಿದೆ.
ಈ ಹಿಂದೆ ಲೋಕಾಯುಕ್ತ ಡಿವೈಎಸ್‌ಪಿಗೆ ದೂರು ನೀಡಿದ್ದ ಬಿಜೆಪಿ ಶಾಸಕರು ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಶಾಸಕ ಸಿ.ಎನ್. ಅಶ್ವತ್ಥನಾರಾಯಣ್, ಎಸ್.ಆರ್.ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು ಕೋರ್ಟ್ಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಇದರಿಂದಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಇತರ ಕಂಪನಿಗಳನ್ನು ಕೈಬಿಟ್ಟು ದಾವಣಗೆರೆಯ ರಾಜಶ್ರೀ ಇಲೆಕ್ಟ್ರಿಕಲ್ಸ್ಗೆ ಗುತ್ತಿಗೆ ನೀಡಲಾಗಿದೆ. ಈ ಕಂಪನಿಗೆ ಗುತ್ತಿಗೆ ನೀಡಲೆಂದೇ ಇತರ ಕಂಪನಿಗಳು ಟೆಂಡರ್ನಲ್ಲಿ ಭಾಗವಹಿಸದಂತೆ ನೋಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಬೇರೆ ರಾಜ್ಯಗಳಲ್ಲಿ 900 ರೂಪಾಯಿಗಳಿಗೆ ಸಿಗುವ ಸ್ಮಾರ್ಟ್ ಮೀಟರ್ ಅನ್ನು 5 ಸಾವಿರದಿಂದ 10 ಸಾವಿರ ರೂಪಾಯಿಗಳಿಗೆ ಗ್ರಾಹಕರಿಗೆ ನೀಡಲಾಗುತ್ತಿದೆ. ಹೀಗಾಗಿ ಇದೊಂದು ದೊಡ್ಡ ಹಗರಣವೆಂದು ದೂರುದಾರರ ಪರ ಹಿರಿಯ ವಕೀಲ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದ್ದಾರೆ.
ಸ್ಮಾರ್ಟ್ ಮೀಟರ್ ಟೆಂಡರ್ ಸುಮಾರ್ 10 ಸಾವಿರ ಕೋಟಿ ರೂಪಾಯಿ ಮೊತ್ತದ ದೊಡ್ಡ ಟೆಂಡರ್ ಆಗಿರುವುದರಿಂದ ಜಾಗತಿಕ ಟೆಂಡರ್ ಕರೆಯಬೇಕಿತ್ತು. ಆದರೆ ಹಾಗೆ ಮಾಡದೆ ಕೇವಲ 354 ಕೋಟಿ ರೂ. ವ್ಯವಹಾರ ನಡೆಸುವ ರಾಜಶ್ರೀ ಇಲೆಕ್ಟ್ರಿಕಲ್ಸ್ಗೆ ಟೆಂಡರ್ ನೀಡಲಾಗಿದೆ. 10 ವರ್ಷಕ್ಕೆ 5296 ಕೋಟಿ ರೂಪಾಯಿಗೆ ನೀಡಲಾಗಿರುವ ಟೆಂಡರ್ ಅನ್ನು ಬೇಕೆಂದೇ 997 ಕೋಟಿ ರೂ. ಟೆಂಡರ್ ಎಂಬಂತೆ ಬಿಂಬಿಸಿ ರಾಜಶ್ರೀ ಇಲೆಕ್ಟ್ರಿಕಲ್ಸ್ ಕಂಪನಿಗೆ ನೀಡಲಾಗಿದೆ. ಬೆಸ್ಕಾಂ ವ್ಯಾಪ್ತಿಗೆ ಮಾತ್ರ ಈ ಟೆಂಡರ್ ಕರೆಯಲಾಗಿದ್ದರೂ ಬೆಸ್ಕಾಂ ಇತರ ಎಸ್ಕಾಂಗಳಿಗೂ ಇದೇ ಸ್ಮಾರ್ಟ್ ಮೀಟರ್ ಖರೀದಿಸಿರುವಂತೆ ಸೂಚಿಸಿರುವುದು ಸಂಪೂರ್ಣ ಕಾನೂನುಬಾಹಿರ ಹಾಗೂ ಅಕ್ರಮವಾಗಿದೆ.
ಕೇಂದ್ರ ಸರ್ಕಾರದ ಆರ್‌ಡಿಎಸ್‌ಎಸ್ ಯೋಜನೆಯಡಿ 900 ರೂಪಾಯಿಗೆ ಸಿಗುವ ಮೀಟರ್ ಅನ್ನು 5 ಸಾವಿರದಿಂದ 8,800 ರೂಪಾಯಿಗಳಿಗೆ ಗ್ರಾಹಕರು ಖರೀದಿಸಬೇಕಾದ ಅನಿವಾರ್ಯತೆ ತಂದೊಡ್ಡಿದ್ದಾರೆ. ಇದಕ್ಕೆಲ್ಲಾ ಬೆಸ್ಕಾಂ ಅಧ್ಯಕ್ಷ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರ ಅಧಿಕಾರಿಗಳೇ ಹೊಣೆ. ತನಿಖೆ ಅನುಮತಿಗಾಗಿ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದೆ. ಲೋಕಾಯುಕ್ತ ಡಿವೈಎಸ್‌ಪಿಗೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸಿಲ್ಲ. ಹೀಗಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಬೇಕು ಎಂದು ಬಿಜೆಪಿ ನಾಯಕರು ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
























