ಪುತ್ತೂರು: ದೇಶದ ಆರ್ಥಿಕತೆಗೆ ಹೆಚ್ಚಿನ ಆದಾಯವನ್ನು ಸಣ್ಣ ಕೈಗಾರಿಕೆ ನೀಡುತ್ತಿದ್ದು ಇದರ ಬೆಳವಣಿಗೆಯಲ್ಲಿ ಯುವಜನತೆಯ ಪಾತ್ರವು ಮುಖ್ಯವಾಗಿದೆ. ಈ ಸಣ್ಣ ಕೈಗಾರಿಕೆಯು ಹೆಚ್ಚು ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸುವುದರಲ್ಲಿ ಈ ರೀತಿಯ ಸಂಸ್ಥೆಗಳ ನಡುವಿನ ಒಪ್ಪಂದ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಲಘು ಉದ್ಯೋಗ ಭಾರತಿ-ಕರ್ನಾಟಕದ ಅಧ್ಯಕ್ಷ ನಾರಾಯಣ್ ಪ್ರಸನ್ನ.ಕೆ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಐಕ್ಯೂಎಸಿ ಘಟಕದ ವತಿಯಿಂದ ನಡೆದ ಲಘು ಉದ್ಯೋಗ ಭಾರತಿ-ಕರ್ನಾಟಕ ಇದರೊಂದಿಗೆ ಆಯೋಜಿಸಲಾದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ, ವಾಣಿಜ್ಯ ವಿಭಾಗದ ಡೀನ್ ರೇಖಾ.ಪಿ. ಮಾತನಾಡಿ, ಲಘು ಉದ್ಯೋಗ ಭಾರತಿ ರಾಷ್ಟ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು ಈ ಸಂಸ್ಥೆಯು ದೇಶಾದ್ಯಂತ ವಿಸ್ತಾರಗೊಂಡಿದೆ. ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಮತ್ತು ಉದ್ಯಮ ಶೀಲತೆಯ ಬಗ್ಗೆ ತಿಳಿದುಕೊಳ್ಳಲು ಇದೊಂದು ಸೂಕ್ತ ಸಂಸ್ಥೆಯಾಗಿದೆ ಎಂದು ಹೇಳಿದರು.
ಲಘು ಉದ್ಯೋಗ ಭಾರತಿ- ಕರ್ನಾಟಕದೊಂದಿಗೆ ಕಾಲೇಜಿನ ಒಪ್ಪಂದದ ಪ್ರತಿಯನ್ನು ಅಧ್ಯಕ್ಷರಾದ ನಾರಾಯಣ್ ಪ್ರಸನ್ನ.ಕೆ ಇವರು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ನಾಯಕ್ ಇವರಿಗೆ ಹಸ್ತಾಂತರಿಸಲಾಯಿತು
ವೇದಿಕೆಯಲ್ಲಿ ಲಘು ಉದ್ಯೋಗ ಭಾರತಿ-ಕರ್ನಾಟಕ ಪುತ್ತೂರು ಘಟಕದ ಕಾರ್ಯದರ್ಶಿ ಮಹೇಶ್ ಕುಮಾರ್, ಸಂಚಾಲಕ ಮುರಳೀಧರ.ಕೆ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ. ಎನ್, ಐಕ್ಯೂಎಸಿ ಘಟಕದ ಮುಖ್ಯಸ್ಥೆ ಡಾ. ರವಿಕಲಾ, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ. ಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಪ್ರಸಾದ್ ಕೆ.ಎಸ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮಿ.ಎನ್ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್ ಸ್ವಾಗತಿಸಿ , ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯಸರಸ್ವತಿ ವಂದಿಸಿದರು. ವಾಣಿಜ್ಯ ವಿಭಾಗದ ಡೀನ್ ರೇಖಾ.ಪಿ. ನಿರೂಪಿಸಿದರು.
























