ಜಲಂಧರ್: ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.
ಜಲಂಧರ್‌ನ ತಮ್ಮ ಮನೆಯ ಸಮೀಪ ಸೋಮವಾರ ಸಂಜೆ ವಾಕಿಂಗ್ ಮಾಡುತ್ತಿದ್ದ ವೇಳೆ ಅಪರಿಚಿತ ಕಾರೊಂದು ಫೌಜಾ ಸಿಂಗ್ ಅವರಿಗೆ ಢಿಕ್ಕಿ ಹೊಡೆದಿದೆ. ಈ ಅಪಘಾತದಿಂತ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿದೆ.
ಸಿಂಗ್ ಅವರು 2000 ನೇ ಇಸವಿಯಲ್ಲಿ ಮ್ಯಾರಥಾನ್ ಪಯಣವನ್ನು ಆರಂಭಿಸಿದ್ದರು. ಅಂತಿಮವಾಗಿ ಎಂಟು ರೇಸ್‌ಗಳಲ್ಲಿ ಅವರು ಭಾಗವಹಿಸಿದ್ದರು. ಟೊರೆಂಟೋ ಮ್ಯಾರಥಾನ್‌ನಲ್ಲಿ 2011 ರಲ್ಲಿ ಭಾಗವಹಿಸಿದ ಸಿಂಗ್ ಅವರು ಆ ಬಳಿಕ ವಿಶ್ವಕ್ಕೆ ಪರಿಚಿತರಾದರು. ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎಂಬ ಹೆಗ್ಗಳಿಕೆಯೂ ಇವರಿಗಿತ್ತು. ಆದರೆ ಜನನ ಪ್ರಮಾಣಪತ್ರ ಇಲ್ಲದ ಕಾರಣ ಗಿನ್ನಿಸ್ ದಾಖಲೆಯಲ್ಲಿ ಅಧಿಕೃತವಾಗಿ ನೋಂದಾಯಿಸುವುದು ಅಸಾಧ್ಯವಾಯಿತು. 2012 ರಲ್ಲಿ ಲಂಡನ್ ಮ್ಯಾರಥಾನ್‌ನಲ್ಲಿ 20 ಕಿ.ಮೀ. ಓಟ ಮುಗಿಸುವ ಮೂಲಕ ಮತ್ತೊಮ್ಮೆ ವಿಶ್ವವನ್ನು ಅಚ್ಚರಿಗೊಳಿಸಿದರು. ಅವರು 2013 ರಲ್ಲಿ ಹಾಂಕಾಂಗ್ ಮ್ಯಾರಥಾನ್‌ನಲ್ಲಿ ತಮ್ಮ 101 ನೇ ವಯಸ್ಸಿನಲ್ಲಿ ಭಾಗವಹಿಸಿ ತಮ್ಮ ವೃತ್ತಿಪರ ಮ್ಯಾರಥಾನ್‌ಗೆ ವಿದಾಯ ಹೇಳಿದ್ದರು.
























