ಲೈಂಗಿಕ ಕಿರುಕುಳ ಪ್ರತಿಭಟಿಸಿ ಕಾಲೇಜಲ್ಲೇ ಬೆಂಕಿ ಹಚ್ಚಿಕೊಂಡಿದ್ದ ವಿದ್ಯಾರ್ಥಿನಿ ಸಾವು

ಪ್ರಾಧ್ಯಾಪಕರ ಕಿರುಕುಳ ತಾಳಲಾರದೆ ಆತ್ಮಾಹುತಿಗೆ ಯತ್ನಿಸಿದ್ದ ಬಿ.ಎಡ್‌ ವಿದ್ಯಾರ್ಥಿನಿ

ಭುವನೇಶ್ವರ : ಲೈಂಗಿಕ ಕಿರುಕುಳ ಪ್ರತಿಭಟಿಸಿ ಕಾಲೇಜಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಲೇಜಿನಲ್ಲಿ ಪ್ರಾಧ್ಯಾಪಕರು ದೀರ್ಘಕಾಲದಿಂದ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಇದರಿಂದ ಬೇಸರಗೊಂಡಿದ್ದ ಆಕೆ ಕಾಲೇಜಿನಲ್ಲೇ ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿ ಬೆಂಕಿ ಹಚ್ಚಿಕೊಂಡಿದ್ದರು. ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಬಾಲಸೋರ್​ನ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ. ವಿಭಾಗದ ಮುಖ್ಯಸ್ಥರು ಆಕೆಯನ್ನು ನಿರಂತರ ಲೈಂಗಿಕ ಶೋಷಣೆ ಮಾಡುತ್ತಿದ್ದರು. ಕಾಲೇಜು ಪ್ರಾಂಶುಪಾಲರ ಬಳಿ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ, ಕಾಲೇಜು ಆಡಳಿತಕ್ಕೂ ದೂರು ನೀಡಿದ್ದರು. ಯಾವುದೇ ಕ್ರಮ ಕೈಗೊಳ್ಳದ ಕಾರಣ ಬೇಸರದಿಂದ ಆಕೆ ಕಾಲೇಜು ಆವರಣದಲ್ಲಿಯೇ ಬೆಂಕಿ ಹಚ್ಚಿಕೊಂಡಿದ್ದರು.





















































 
 

ದೇಹವು ಶೇ.90ರಷ್ಟು ಸುಟ್ಟು ಹೋಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಬಾಲಸೋರ್ ಜಿಲ್ಲಾ ಆಸ್ಪತ್ರೆಯಿಂದ ಜುಲೈ 12ರಂದು ವಿದ್ಯಾರ್ಥಿನಿಯನ್ನು ಭುವನೇಶ್ವರದ ಏಮ್ಸ್​ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್​​ನಲ್ಲಿ ಇರಿಸಲಾಗಿತ್ತು. ವೈದ್ಯರು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದ್ದರೂ ಜುಲೈ 14ರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಹ ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಪ್ರಕಾರ, ಸಮೀರ್ ಕುಮಾರ್ ಎಂಬ ಪ್ರಾಧ್ಯಾಪಕ ನಿರಂತರವಾಗಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ಅವರು ಈ ಘಟನೆಯಿಂದ ಮಾನಸಿಕವಾಗಿ ನೊಂದಿದ್ದರು.

ಒಡಿಶಾದಲ್ಲಿ ನಡೆದಿರುವ ಈ ಘಟನೆಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಫಕೀರ್‌ ಮೋಹನ್‌ ಸ್ವಾಯತ್ತ ಕಾಲೇಜಿನಲ್ಲಿ ಬಿ.ಎಡ್‌ ಕಲಿಯುತ್ತಿದ್ದ 20ರ ಹರೆಯದ ವಿದ್ಯಾರ್ಥಿನಿಯ ದೂರನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಕಳೆದ ಶನಿವಾರ ವಿದ್ಯಾರ್ಥಿನಿ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾದ ಸ್ವಲ್ಪ ಸಮಯದ ನಂತರ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲ ದಿಲೀಪ್ ಕುಮಾರ್ ಘೋಷ್ ಅವರನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

error: Content is protected !!
Scroll to Top