ಬಾಟಲಿಗೆ 10ರಿಂದ 100 ರೂ. ತನಕ ಕಡಿತ ಮಾಡಿದ ಸರ್ಕಾರ
ಅಮರಾವತಿ: ಸರ್ಕಾರ ಮದ್ಯದ ದರದಲ್ಲಿ ಭಾರಿ ಇಳಿಕೆ ಮಾಡಿದೆ. ಬಾಟಲಿಗೆ 10ರಿಂದ 100 ರೂ. ತನಕ ಇಳಿಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈ ಸುದ್ದಿ ನೋಡಿ ಕರ್ನಾಟಕದ ಮದ್ಯಪ್ರಿಯರು ಖುಷಿಯಿಂದ ಕುಪ್ಪಳಿಸುವ ಅಗತ್ಯವಿಲ್ಲ. ದರ ಇಳಿಕೆಯಾಗಿರುವುದು ಪಕ್ಕದ ಆಂಧ್ರ ಪ್ರದೇಶದಲ್ಲಿ.
ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳು ಕಂದಾಯ ಸಂಗ್ರಹಕ್ಕೆ ಮದ್ಯದ ದರ ಏರಿಕೆ ಮಾಡುತಿದ್ದರೆ ಆಂಧ್ರದ ಚಂದ್ರಬಾಬು ನಾಯ್ಡು ಸರ್ಕಾರ ಮಾತ್ರ ಮದ್ಯದ ದರ ಇಳಿಸಿ ಮದ್ಯಪ್ರಿಯರಿಗೆ ಶುಭ ಸುದ್ದಿ ನೀಡಿದೆ.
ಆಂಧ್ರದಲ್ಲಿ ಇದೇ ಮೊದಲ ಬಾರಿ ಮದ್ಯದ ದರ ಇಳಿಸಿದ್ದು, ಪ್ರತಿ ಬಾಟಲ್‌ಗೆ 10 ರೂ.ಯಿಂದ 100 ರೂ.ವರೆಗೆ ಕಡಿತಗೊಳಿಸಿದೆ. ಈ ಮೂಲಕ ರಾಜ್ಯದಲ್ಲಿ ಮದ್ಯದ ಗ್ರಾಹಕರಿಗೆ ಪ್ರತಿ ತಿಂಗಳು 116 ಕೋಟಿ ರೂ. ಉಳಿತಾಯ ಆಗಲಿದೆ. ಆಂಧ್ರಪ್ರದೇಶದಲ್ಲಿ 30 ಬ್ರಾಂಡ್‌ಗಳ ಬೆಲೆಯು ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿಗಿಂತ ಕಡಿಮೆಯಾಗಿದೆ.
ಈ ಕುರಿತು ಅಧಿಕಾರಿಗಳ ಜೊತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು ಮದ್ಯ ನೀತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಂಡು, ಕೈಗೆಟುಕುವ ದರದಲ್ಲಿ ಅದನ್ನು ಪೂರೈಕೆ ಮಾಡಿ. ಜೊತೆಗೆ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಎಂದು ಸೂಚಿಸಿದ್ದಾರೆ. ಈ ಹೊಸ ನೀತಿಯಿಂದ ರಾಜ್ಯದ ಆದಾಯ ಹೆಚ್ಚುವ ನಿರೀಕ್ಷೆಯಿದೆ ಎಂದಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ‍್ಯಾಂಡ್‌ಗಳನ್ನು ಮಾತ್ರ ರಾಜ್ಯಕ್ಕೆ ಅನುಮತಿಸುವಂತೆ ಮತ್ತು ಸುಂಕ ಪಾವತಿಸದ, ಅಕ್ರಮ ಅಥವಾ ನಕಲಿ ಮದ್ಯದ ಮಾರಾಟವನ್ನು ನಿಷೇಧಿಸುವಂತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಂತೆ ತಿಳಿಸಿದ್ದಾರೆ.
























