ಸಂಸ್ಥೆ ಸರಿಯಾಗಿ ಸ್ಪಂದಿಸಿಲ್ಲ, ಪರಿಹಾರದ ಬಗ್ಗೆ ಮಾತನಾಡಿಲ್ಲ ಎಂದು ಆರೋಪಿಸಿದ ಕುಟುಂಬಸ್ಥರು
ಮಂಗಳೂರು : ಮಂಗಳೂರಿನ ಸಮೀಪ ಸುರತ್ಕಲ್ನಲ್ಲಿರುವ ಎಂಆರ್ಪಿಎಲ್ ಘಟಕದಲ್ಲಿ ಶನಿವಾರ ವಿಷಾನಿಲ ಸೋರಿಕೆಯಾಗಿ ಮೃತಪಟ್ಟ ಸಿಬ್ಬಂದಿಯ ಶವವನ್ನು ಅವರ ಹುಟ್ಟೂರಿಗೆ ಒಯ್ದ ಐದು ಮಂದಿಯನ್ನು ಅಲ್ಲಿನ ಗ್ರಾಮಸ್ಥರು ದಿಗ್ಬಂಧನದಲ್ಲಿ ಇರಿಸಿಕೊಂಡಿದ್ದಾರೆ.
ಎಂಆರ್ಪಿಎಲ್ನ ಒಎಂಎಸ್ ವಿಭಾಗದ ಟ್ಯಾಂಕ್ ಎಫ್.ಬಿ.7029ರಲ್ಲಿ ಶನಿವಾರ ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟು ಓರ್ವ ಅಸ್ವಸ್ಥರಾಗಿದ್ದರು. ಪ್ರಯಾಗ್ ರಾಜ್ ಮೂಲದ ವರ್ಷದ ದೀಪ್ ಚಂದ್ರ ಭಾರ್ತಿಯಾ (33), ಕೇರಳದ ವರ್ಷದ ಬಿಜಿಲ್ ಪ್ರಸಾದ್ (33) ಮೃತಪಟ್ಟಿರುವ ಸಿಬ್ಬಂದಿ. ಗದಗ ಮೂಲದ ವಿನಾಯಕ ಮಯಗೇರಿ ಎಂಬವರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಚ್2ಎಸ್ ವಿಷಾನಿಲ ಸೋರಿಯಾಗಿ ದೀಪ್ ಚಂದ್ರ ಮತ್ತು ಬಿಜಿಲ್ ಪ್ರಸಾದ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇವರ ರಕ್ಷಣೆಗೆ ಮುಂದಾದ ವಿನಾಯಕ್ ಸೇರಿದಂತೆ ಮೂವರು ಅಸ್ವಸ್ಥರಾಗಿದ್ದರು. ಮೃತರ ಮರಣೋತ್ತರ ಪರೀಕ್ಷೆ ಭಾನುವಾರ ನಡೆದಿತ್ತು. ನಂತರ ದೀಪ್ ಚಂದ್ರ ಭಾರ್ತಿಯಾ ಅವರ ಮೃತದೇಹವನ್ನು ವಿಮಾನದಲ್ಲಿ ಅವರ ಕುಟುಂಬದ ಜೊತೆ ಎಂಆರ್ಪಿಎಲ್ನ ಐವರು ಸಿಬ್ಬಂದಿ ತೆಗೆದುಕೊಂಡು ಹೋಗಿದ್ದರು.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ತಲುಪಿದ ಐವರನ್ನು ದೀಪ್ ಚಂದ್ರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂಆರ್ಪಿಎಲ್ ಮ್ಯಾನೇಜ್ಮೆಂಟ್ ಸರಿಯಾಗಿ ಸ್ಪಂದನೆ ನೀಡಿಲ್ಲ. ಪರಿಹಾರದ ಬಗ್ಗೆ ಮಾತನಾಡಿಲ್ಲ. ಅವರು ತಕ್ಷಣ ಇಲ್ಲಿಗೆ ಬರಬೇಕು. ಅಲ್ಲವರೆಗೂ ನೀವು ಇಲ್ಲಿಂದ ಹೋಗುವಂತಿಲ್ಲ ಎಂದು ಶರತ್ತು ಹಾಕಿದ್ದಾರೆ. ಹೀಗಾಗಿ ಅಲ್ಲಿಂದ ಎಂಆರ್ಪಿಎಲ್ಗೆ ವಿಡಿಯೋ ಸಂದೇಶ ಕಳುಹಿಸಿರುವ ಐವರು ಕೂಡಲೇ ಇಲ್ಲಿಗೆ ಬಂದು ನಮ್ಮ ರಕ್ಷಣೆ ಮಾಡಿ ಎಂದು ಮೊರೆ ಇಟ್ಟಿದ್ದಾರೆ.
ಎಂಆರ್ಪಿಎಲ್ ಸಿಬ್ಬಂದಿ ಪ್ರಸಾದ್, ಬಲ್ಬೀರ್, ಸುರೇಂದ್, ಬಾಲನಾರಾಯಣ್, ಪಂಕಜ್ಗೆ ದಿಗ್ಭಂಧನ ಹಾಕಲಾಗಿದ್ದು ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಸೇರಿದಂತೆ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಈವರೆಗೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ಮೃತನ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾನೂನು ಕ್ರಮ ಆಗಬೇಕು. ಅಲ್ಲದೆ ಎಂಆರ್ಪಿಎಲ್ ಆಡಳಿತ ಮಂಡಳಿಯವರು ಬಂದು ಪರಿಹಾರ ನೀಡಿ ನಂತರ ಈ ಐವರನ್ನು ಬಿಡಿಸಿಕೊಂಡು ಹೋಗಬೇಕು ಎಂದು ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
























