ಪುತ್ತೂರು: ಶಾಸಕ ಅಶೋಕ್ ರೈ ಅವರು ಈ ಹಿಂದೆ ಬಿಜೆಪಿಯಲ್ಲಿದ್ದಾಗ ಸುಳ್ಯದ ಅಭಿವೃದ್ಧಿಯನ್ನು ಶ್ಲಾಘಿಸುತ್ತಿದ್ದರು. ಈಗ ಕಾಂಗ್ರೆಸ್ ಸೇರಿ ಸುಳ್ಯ ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ಜ್ಞಾನದ ಕೊರತೆಯ ಕಾರಣಕ್ಕೆ ಅವರು ಹೀಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಣಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾತನಾಡಿದ ಅವರು, ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶಾಸಕ ಅಶೋಕ್ ರೈ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರಿಗೆ ಈ ಹಿಂದೆ ಕಾಣಿಸಿದ ಅಭಿವೃದ್ಧಿ ಈಗ ಕಾಣಿಸುತ್ತಿಲ್ಲ. ಸುಳ್ಯ ಅಭಿವೃದ್ಧಿ ಆಗಿಲ್ಲ ಎನ್ನುವವರು ಒಮ್ಮೆ ಸುಳ್ಯಕ್ಕೆ ಬಂದು ಪರಿಶೀಲನೆ ಮಾಡುವಂತೆ ಟಾಂಗ್ ನೀಡಿದ್ದಾರೆ.
ಹಿಂದೆ ಸಚಿವರಾಗಿದ್ದ ಅಂಗಾರ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ, ಸಂಸದನಾಗಿದ್ದ ನಳಿನಿ ಕುಮಾರ್ ಕಟೀಲ್ ನೇತೃತ್ವದಲ್ಲಿ ಆದ ಅಭಿವೃದ್ಧಿ, ಈಗ ನನ್ನ ಮತ್ತು ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಜೊತೆಗೆ ಸುಳ್ಯ ಮುಂದುವರಿಯುತ್ತಿದೆ. ಸುಳ್ಯದ ಅಂಬೇಡ್ಕರ್ ಭವನಕ್ಕೆ ನಿಮ್ಮ ಹಣದ ಅವಶ್ಯಕತೆ ನಮಗಿಲ್ಲ. ನಾನು ಮುಖ್ಯಮಂತ್ರಿಗಳ ಬಳಿಗೆ ತೆರಳಿದಾಗ ನೀವು ಸಿಎಂ ಬಳಿಯಲ್ಲಿ ಅರ್ಜಿಗಳನ್ನು ಹಿಡಿದು ನಿಂತದ್ದನ್ನು ಕಂಡಿದ್ದೇನೆ. ನೀವು ಪುತ್ತೂರಿಗೆ ಎಷ್ಟು ಅನುದಾನ ತಂದಿದ್ದೀರಿ? ನೀವು ಈಗ ಉದ್ಘಾಟನೆ ಮಾಡುತ್ತಿರುವ ಯೋಜನೆಗಳು ಈ ಹಿಂದೆ ಬಿಜೆಪಿ ಶಾಸಕರಿದ್ದ ಅವಧಿಯಲ್ಲಿ ಮಂಜೂರಾದವು ಎಂದು ತಿರುಗೇಟು ನೀಡಿದ್ದಾರೆ.
ಹಾಗೆಯೇ ಅಶೋಕ್ ರೈ ಅವರು ತಮ್ಮ ಸಾಧನೆಯನ್ನು, ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಎಂದು ಸವಾಲೆಸೆದಿದ್ದಾರೆ.
























