ತಾರಕಕ್ಕೇರಿದ ಕೈ-ಕೈ ಕಿತ್ತಾಟ : ಶಾಸಕರ ಆಪರೇಷನ್‌ ಗುಸುಗುಸು

ಕಿಡಿ ಹಚ್ಚಿದ ಶಾಸಕರ ಬೆಂಬಲವಿಲ್ಲ ಎಂಬ ಹೇಳಿಕೆ

ಬಲಾಬಲ ಸಾಬೀತುಪಡಿಸಲು ಉಭಯ ಬಣಗಳ ರಹಸ್ಯ ಕಾರ್ಯಾಚರಣೆ

ಬೆಂಗಳೂರು: ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಬಹಳ ಆತ್ಮವಿಶ್ವಾಸದಿಂದಲೇ ಹೇಳುತ್ತಿದ್ದರೂ ಇದರೊಂದಿಗೆ ಕಾಂಗ್ರೆಸ್‌ನೊಳಗಿನ ಒಳಜಗಳ ಮತ್ತು ತುಮುಲ ಮುಗಿಯಿತು ಎಂದು ಭಾವಿಸಬೇಕಾಗಿಲ್ಲ. ಕೈ ಹೈಕಮಾಂಡ್‌ ಯಾವುದನ್ನೂ ಸ್ಪಷ್ಟವಾಗಿ ಹೇಳದ ಕಾರಣ ಕೈ ಕಿತ್ತಾಟ ಅಷ್ಟು ಬೇಗ ಮುಗಿಯುವುದಿಲ್ಲ ಎನ್ನುವುದು ಗ್ಯಾರಂಟಿಯಾಗಿದೆ. ಅದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತೆ ದಿಲ್ಲಿಗೆ ದೌಡಾಯಿಸಿರುವುದೇ ಸಾಕ್ಷಿ.





















































 
 

ಏನೆಲ್ಲ ತಿಪ್ಪರಲಾಗ ಹಾಕಿದರೂ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಸಲು ಸಾಧ್ಯವಾಗದೆ ಶಿವಕುಮಾರ್‌ ಬಣ ಹತಾಶ ಸ್ಥಿತಿಯಲ್ಲಿದೆ. ಇದು ಶಿವಕುಮಾರ್‌ ನಡೆ ಮತ್ತು ನಡವಳಿಕೆಯಿಂದಲೇ ತಿಳಿಯುತ್ತಿದೆ. ಡಿಕೆಶಿ ಬಣದ ಪಟ್ಟಿಗೆ ಅಷ್ಟೇ ಬಲವಾದ ಪ್ರತಿಪಟ್ಟನ್ನು ಹಾಕುತ್ತಾ ಸಿದ್ದರಾಮಯ್ಯ ಮತ್ತು ಅವರ ಬಣದವರು ಆಟ ಆಡುತ್ತಾ ಇದ್ದಾರೆ. ಅದರಲ್ಲೂ ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ ಎಂದು ಸಿದ್ದರಾಮಯ್ಯ ನಿನ್ನೆ ದಿಲ್ಲಿಯಲ್ಲಿ ಬಹಿರಂಗವಾಗಿ ಹೇಳಿರುವುದು ಡಿಕೆಶಿ ಬಣವನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿಯವರ ದೆಹಲಿ ಭೆಟಿಯ ಫಲಶ್ರುತಿಯ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

ಸಿದ್ದರಾಮಯ್ಯ ಹೇಳಿಕೆ ಬಳಿಕ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಡಿಕೆಶಿ ಮತ್ತು ಸಿದ್ದು ನಡುವೆ ಮುಸುಕಿನ ಗುದ್ದಾಟ ಕಡಿಮೆಯಾಗುವ ಬದಲು ಹೆಚ್ಚಾಗಿದೆ. ಶಾಸಕರ ಬೆಂಬಲ ಹೆಚ್ಚಿಸಿಕೊಳ್ಳಲು ಎರಡೂ ಬಣಗಳಿಂದ ರಹಸ್ಯ ಕಸರತ್ತು ನಡೆಯುತ್ತಿದೆ. ಡಿಕೆಶಿ ಮತ್ತು ಸಿದ್ದು ಬಣಗಳು ಉಭಯ ಬಣಗಳ ಶಾಸಕರನ್ನು ಸೆಳೆದುಕೊಳ್ಳಲ ಕುದುರೆ ವ್ಯಾಪಾರ ನಡೆಸುತ್ತಿವೆ ಎನ್ನಲಾಗಿದೆ. ಹೀಗಾಗಿ ಕೈಯೊಳಗೆ ಆಪರೇಷನ್‌ ಕೈ-ಕೈ ನಡೆಯುತ್ತಿದೆ ಎಂದು ಮೂಲವೊಂದು ಹೇಳುತ್ತಿದೆ.

ಡಿ.ಕೆ.ಶಿವಕುಮಾರ್‌ಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ, ನನಗೆ ಶಾಸಕರ ಸಂಪೂರ್ಣ ಬೆಂಬಲ ಇದೆ, ನಾನೇ ಐದು ವರ್ಷ ಸಿಎಂ, ಅಧಿಕಾರ ಹಂಚಿಕೆ ಡೀಲ್‌ ಆಗಿಲ್ಲ ಎಂಬ ಸಿದ್ದರಾಮಯ್ಯನವರ ಈ ಹೇಳಿಕೆ ಈಗ ಇಡೀ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಡಿ.ಕೆ.ಶಿವಕುಮಾರ್ ಬಣದಲ್ಲಿ ಈ ಹೇಳಿಕೆ ತೀವ್ರ ಅಸಮಾಧಾನದ ಬೆಂಕಿ ಹಚ್ಚಿದೆ. ಈ ಹೇಳಿಕೆ ಬೆನ್ನಲ್ಲೇ ಅಸಲಿ ನಂಬರ್ ಗೇಮ್ ಶುರುವಾಗಿದೆ. ಯಾರ ಬಲ ಎಷ್ಟು? ಯಾರ ಕೈ ಮೇಲುಗೈ? ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಇಬ್ಬರು ನಾಯಕರ ಹಿಂದೆ ನಿಂತಿರುವ ಶಾಸಕರು ಮತ್ತು ಸಚಿವರು ಯಾರು? ಪಕ್ಷದಲ್ಲಿ ಬಾಸ್‌ ಯಾರು ಎಂಬ ಅಸಲಿ ಆಟ ಶುರುವಾಗಿದೆ ಈಗ ಶುರುವಾಗಿದೆ.

ಪಕ್ಷದಲ್ಲಿ ಅನೇಕ ಶಾಸಕರು ನಾಯಕತ್ವ ಬದಲಾವಣೆ ಆಗಬೇಕು, ನಮಗೆ ಅನುದಾನ ಸಿಗುತ್ತಿಲ್ಲ. ಡಿಕೆಶಿ ಸಿಎಂ ಆಗಬೇಕು ಎಂದು ಕೆಲವರು ಬ್ಯಾಟ್‌ ಬೀಸಿದರೆ ಇನ್ನು ಕೆಲವರು ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಎಂದು ರಣಕಹಳೆ ಮೊಳಗಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ಶಾಸಕರಿಂದ ಆಯ್ಕೆ ಆಗಿ ಸಿಎಂ ಆಗಿದ್ದು, ಹಾಗೆಲ್ಲ ಇಳಿಸೋಕೆ ಆಗಲ್ಲ, ಯಾರೋ ಒಂದಿಬ್ಬರು ಡಿಕೆಶಿ ಪರ ನಿಂತರೆ ಖಂಡಿತ ಅದೆಲ್ಲ ಸಾಧ್ಯ ಇಲ್ಲ, ಹೀಗಾಗಿ ಗುಂಪಿನಲ್ಲಿ ಗೋವಿಂದ ಯಾಕೆ ಯಾರಿಗೆ ಎಷ್ಟು ಶಾಸಕರು, ಸಚಿವರ ಬೆಂಬಲ ಇದೆ ಎನ್ನುವುದನ್ನು ನೋಡೋಣ. ಮೊದಲಿಗೆ ಸಿಎಂ ಸಿದ್ದರಾಮಯ್ಯನವರ ಬಲವನ್ನು ನೋಡೋಣ ಎಂದು ಕೆಲವು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ.

ನಿನ್ನೆ ಶಿವಕುಮಾರ್‌ಗೆ ಹೈಕಮಾಂಡ್ ತುರ್ತು ಬುಲಾವ್ ನೀಡಿದ್ದು, ಅವರು ಶಿರಡಿಯಿಂದ ನೇರ ದೆಹಲಿಗೆ ತೆರಳಿದ್ದಾರೆ. ಭಾನುವಾರ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಡಿಕೆಶಿಯವರಿಗೆ ರಾಹುಲ್ ಗಾಂಧಿ ಭೇಟಿಗೆ ಸಮಯ ನೀಡಿರಲಿಲ್ಲ. ಭೇಟಿಗೆ ಕಾದು ಕುಳಿತು ಅವಕಾಶ ಸಿಗದೆ ಶುಕ್ರವಾರ ಅವರು ಬೆಂಗಳೂರಿಗೆ ಮರಳಿದ್ದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿರುವ ನಡುವೆಯೇ ಡಿಕೆಶಿ ಜುಲೈ 8ರಂದು ದೆಹಲಿಗೆ ತೆರಳಿದ್ದರು. ಮಂಗಳವಾರ ಮತ್ತು ಬುಧವಾರ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಇಲಾಖೆ ಸಂಬಂಧ ಮಾತುಕತೆ ನಡೆಸಿದ್ದರು. ಗುರುವಾರ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಹಾಗೆ ನೋಡಿದರೆ ಡಿಕೆಶಿ ಗುರುವಾರವೇ ರಾತ್ರಿ ಬೆಂಗಳೂರಿಗೆ ಮರಳಬೇಕಿತ್ತು. ಭೇಟಿಗೆ ಅವಕಾಶ ಸಿಗಬಹುದು ಎಂಬ ಕಾರಣಕ್ಕೆ ಎರಡು ಬಾರಿ ಡಿಕೆಶಿ ವಿಮಾನ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದರು.

ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ, ವಿಧಾನಪರಿಷತ್‌ ಸದಸ್ಯರ ನೇಮಕ ಸೇರಿ ವಿವಿಧ ವಿಷಯಗಳ ಬಗ್ಗೆ ರಾಹುಲ್‌ ಜೊತೆ ಚರ್ಚೆ ನಡೆಸಲು ಡಿಕೆಶಿ ಬಯಸಿದ್ದರು. ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಬೆಳವಣಿಗೆ ನಡೆಯುತ್ತಿದ್ದರೂ ರಾಹುಲ್‌ ಗಾಂಧಿ ಭೇಟಿಗೆ ಸಮಯಾವಕಾಶ ನೀಡದಿರುವುದು ಭಾರಿ ಕುತೂಹಲ ಮೂಡಿಸಿತ್ತು. ಈಗ ಮತ್ತೆ ತುರ್ತು ಬುಲಾಬ್‌ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಇಂದು ಹೈಕಮಾಂಡಿನಿಂದ ನಿರ್ಣಾಯಕವಾದದ್ದೇನಾದರೂ ಆಗುತ್ತಾ ಅಥವಾ ಮತ್ತೆ ತೇಪೆ ಹಚ್ಚಿ ಕಳುಹಿಸುತ್ತಾರಾ ಎಂಬ ಕುತೂಹಲ ಕೆರಳಿದೆ.

ರಾಜ್ಯ ಕಾಂಗ್ರೆಸ್​ನ ಒಳಜಗಳವನ್ನು ಬಿಜೆಪಿ ತನ್ನ ಅನುಕೂಲಕ್ಕೆ ಚೆನ್ನಾಗಿಯೇ ಬಳಸುತ್ತಿದೆ. ಕಾಂಗ್ರೆಸ್‌ನ 55 ಶಾಸಕರನ್ನು ಸೆಳೆಯಲು ಆಪರೇಷನ್‌ ಕಮಲ ನಡೆಯುತ್ತಿದೆ ಎಂಬ ಗುಸುಗುಸು ಒಂದೆಡೆ ಕೇಳಿಬರುತ್ತಿದ್ದರೆ ಇನ್ನೊಂದೆಡೆ ಕಾಂಗ್ರೆಸ್‌ ಕಿತ್ತಾಟವನ್ನು ಕಂಡು ಬಿಜೆಪಿ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ನಾನೇ ಸಿಎಂ ಎಂದು ಹಳ್ಳಿಯಿಂದ ದಿಲ್ಲಿಯವರೆಗೆ ಹಾದಿ ಬೀದಿಯಲ್ಲಿ ಸಿಎಂ ಬೊಬ್ಬೆ ಹೊಡೆಯುತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಪಾಲಿಕೆ ಸಿಬ್ಬಂದಿಯ ಪ್ರತಿಭಟನೆ ಇವರಿಗೆ ಕಾಣಿಸುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಟೀಕಿಸಿದೆ.

ಐದು ವರ್ಷ ನಾನೇ ಸಿಎಂ ಎಂದು ಹಳ್ಳಿಯಿಂದ ದಿಲ್ಲಿಯವರೆಗೆ ಹಾದಿ ಬೀದಿಯಲ್ಲಿ ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಾದ್ಯಂತ 10 ಪಾಲಿಕೆಗಳ 25,000ಕ್ಕೂ ಹೆಚ್ಚು ಸಿಬ್ಬಂದಿ, ಐದು ದಿನಗಳಿಂದ ಮಾಡುತ್ತಿರುವ ಮುಷ್ಕರ ಕಣ್ಣಿಗೆ ಕಾಣುತ್ತಿಲ್ಲ, ಕಿವಿಗೆ ಬೀಳುತ್ತಿಲ್ಲ. ಕುರ್ಚಿ ಕಿತ್ತಾಟದಲ್ಲಿ, ಬಣ ಬಡಿದಾಟದಲ್ಲಿ ಸಂಪೂರ್ಣವಾಗಿ ಮೈಮರೆತಿರುವ ಕಾಂಗ್ರೆಸ್ ಸರ್ಕಾರದ ಯಾವ ಮಂತ್ರಿಗಳೂ ಇದುವರೆಗೂ ಪ್ರತಿಭಟನಾ ನಿರತ ಪಾಲಿಕೆ ಸಿಬ್ಬಂದಿಯನ್ನು ಭೇಟಿ ಮಾಡುವ ಗೋಜಿಗೆ ಹೋಗಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತೆ ಅಧಿಕಾರವಿಲ್ಲದ ಕುರ್ಚಿಯಲ್ಲಿ ಎಷ್ಟು ದಿನ ಅಂಟಿಕೊಂಡು ಕೂರುತ್ತೀರಿ ಸ್ವಾಮಿ? ರಾಜೀನಾಮೆ ಕೊಟ್ಟು ಹೊರಡಿ, ಒಂದು ಸುಭದ್ರ, ಸುಸ್ಥಿರ, ಜನಪರ ಆಡಳಿತ ಕೊಡಬಲ್ಲ ಬಲಿಷ್ಠ ಮುಖ್ಯಮಂತ್ರಿಗಾಗಿ ಕನ್ನಡಿಗರು ಕಾಯುತ್ತಿದ್ದಾರೆ, ರಾಜೀನಾಮೆ ಕೊಟ್ಟು ಕನ್ನಡಿಗರ ಆಶಯ ಈಡೇರಿಸಿ ಎಂದು ವಿಪಕ್ಷ ನಾಯಕ ಆರ್​. ಅಶೋಕ್ ಕುಟಿಕಿದ್ದಾರೆ.

error: Content is protected !!
Scroll to Top