ಕಾರಿನಲ್ಲಿ ಶಾಲೆಗೆ ಕರೆದೊಯ್ದು ವಿಶ್ವಾಸ ಗಳಿಸಿ ಕಿರುಕುಳ
ಮಂಗಳೂರು : ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಕರೆದೊಯ್ದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 68 ವರ್ಷದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪ ಈ ಘಟನೆ ನಡೆದಿದೆ. ಸಂತ್ರಸ್ತೆ ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ ಮುಲ್ಕಿ ಠಾಣಾ ಪೊಲೀಸರು ಪೋಕ್ಸೊ ಕೇಸ್ ದಾಖಲಿಸಿಕೊಂಡಿದ್ದಾರೆ.
ಕಳೆದ ಎರಡು ತಿಂಗಳಿಂದ ಉದ್ಯಮಿ ಬಾಲಕಿಯನ್ನು ತನ್ನ ಫಾರ್ಚುನರ್ ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಮೂಲ್ಕಿ ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದರೆ ಅಧಿಕ ರಕ್ತದೊತ್ತಡಕ್ಕೆ ಒಳಗಾದ ಆರೋಪಿಯನ್ನು ಮೂಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
























