ಗುಡ್ಡ ಕುಸಿತದ ತನಿಖೆ ಮಾಡುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದ ತಾಯಿ-ಮಕ್ಕಳು
ಕಾರವಾರ: ವಿದೇಶ ಮಹಿಳೆಯೊಬ್ಬಳು ಇಬ್ಬರು ಪುಟ್ಟ ಮಕ್ಕಳೊಂದಿಗೆ ದಟ್ಟಾರಣ್ಯದೊಳಗೆ ಗುಹೆಯೊಳಗೆ ವಾಸ ಮಾಡುತ್ತಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿಉದೆ. ಹಿಂದೂ ಧರ್ಮದ ಕಡೆಗೆ ವಾಲಿದ ರಷ್ಯಾ ಮೂಲದ ಮಹಿಳೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದ ಗುಹೆಯಲ್ಲಿ ವಾಸವಿದ್ದಳು. ಇವರನ್ನು ಪೊಲೀಸರು ರಕ್ಷಿಸಿ ಕರೆದೊಯ್ದಿದ್ದಾರೆ.
ಮೋಹಿ (40) ತನ್ನ ಪುಟ್ಟ ಮಕ್ಕಳಾದ ಪ್ರೆಯಾ (6) ಹಾಗೂ ಅಮಾ (4) ಅವರೊಂದಿಗೆ ಗುಹೆಯಲ್ಲಿ ವಾಸವಾಗಿದ್ದಳು. ರಷ್ಯಾದಿಂದ ಬಿಸಿನೆಸ್ ವಿಸಾದಡಿ ಗೋವಾಕ್ಕೆ ಬಂದಿದ್ದ ಈ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ಇಲ್ಲಿನ ದಟ್ಟ ಅರಣ್ಯವಾದ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು. ಅಲ್ಲಿಯೇ ಚಿಕ್ಕ ರುದ್ರನ ಮೂರ್ತಿ ಇಟ್ಟುಕೊಂಡು ಪೂಜಾ ಕಾರ್ಯ ಮಾಡುತ್ತಾ ದಿನ ಕಳೆಯುತಿದ್ದಳು. ಸಿಪಿಐ ಶ್ರೀಧರ್ ನೇತೃತ್ವದ ತಂಡ ಈ ಭಾಗದಲ್ಲಿ ಗುಡ್ಡ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಗಸ್ತು ತಿರುಗುವಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದು ಕಂಡುಬಂದಿದೆ. ಅಲ್ಲಿ ಹೋಗಿ ನೋಡಿದಾಗ ವಿದೇಶಿ ಮಹಿಳೆ ಮತ್ತು ಇಬ್ಬರು ಮಕ್ಕಳು ಕಂಡುಬಂದಿದ್ದಾರೆ.
ರಷ್ಯಾದ ಮೋಹಿಗೆ ಅಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು. ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ಕತ್ತಲಲ್ಲೇ ಬದುಕು ಕಳೆಯುತಿದ್ದಳು. ಎಸ್‌ಪಿ ಎಂ.ನಾರಾಯಣ್ ಸಲಹೆಯಂತೆ ಆಕೆಗೆ ಸ್ಥಳೀಯ ಎನ್‌ಜಿಒ ಮೂಲಕ ಆಪ್ತ ಸಮಾಲೋಚನೆ ನಡೆಸಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದು, ರಷ್ಯಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ದೇಶಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.
























