ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕ್ರಿಕೆಟ್ ಬದುಕು ಅಂತಿಮ ಘಟ್ಟಕ್ಕೆ
ನವದೆಹಲಿ: ಮೊದಲ ಬಾರಿ ಟೆಸ್ಟ್ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶುಭ್‌ಮನ್ ಗಿಲ್ ಹೆಗಲಿಗೆ ಸದ್ಯದಲ್ಲೇ ಏಕದಿನ ತಂಡದ ನಾಯಕತ್ವದ ಹೊಣೆಯೂ ಬೀಳಲಿದೆ. ಸದ್ಯದಲ್ಲೇ ಭಾರತ ಏಕದಿನ ತಂಡದ ನಾಯಕತ್ವವನ್ನೂ ಶುಭಮನ್ ಗಿಲ್ ವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದರೊಂದಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್ ಬದುಕು ಬಹುತೇಕ ಕೊನೆಯ ಘಟ್ಟಕ್ಕೆ ತಲುಪಿದಂತಾಗಿದೆ ಎನ್ನಲಾಗುತ್ತಿದೆ. ಶರ್ಮಾ ಮತ್ತು ಕೊಹ್ಲಿ ಇಲ್ಲದ ಟೆಸ್ಟ್ ತಂಡ ಈಗಾಗಲೇ ತನ್ನ ಛಾಪು ಮೂಡಿಸಿದೆ.
ಈಗಾಗಲೇ ಟೆಸ್ಟ್ ಹಾಗೂ ಟಿ20 ಮಾದರಿಗಳಿಂದ ನಿವೃತ್ತಿ ಪಡೆದಿರುವ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಈ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಗೂ ಮೊದಲೇ ಬಿಸಿಸಿಐ ಗಿಲ್‌ಗೆ ನಾಯಕತ್ವದ ಜವಾಬ್ದಾರಿ ವಹಿಸಲಿದೆ ಎಂದು ವರದಿಯಾಗಿದೆ.
2027ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಗಿಲ್ ಮುನ್ನಡೆಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ರೋಹಿತ್ ಶರ್ಮಾ ಅವರು ಮುಂದಿನ ಏಕದಿನ ವಿಶ್ವಕಪ್ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಮೆಗಾಕೂಟ ನಡೆಯಲಿದೆ. ಇತ್ತೀಚೆಗೆ ಸುನೀಲ್ ಗವಾಸ್ಕರ್ ಅವರು ರೋಹಿತ್ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್ ಭಾರತದ ತಂಡದಲ್ಲಿ ಇರುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಜತೆಗೆ ಇದಕ್ಕೆ ಕಾರಣವನ್ನು ಕೂಡ ತಿಳಿಸಿದ್ದರು. 50 ಓವರ್‌ಗಳ ಸ್ವರೂಪದಲ್ಲಿ ಕೊಹ್ಲಿ ಮತ್ತು ರೋಹಿತ್ ಅದ್ಭುತ ಪ್ರದರ್ಶನ ನೀಡಿದ್ದರೂ ಅವರು ಇನ್ನೂ ಎರಡು ವರ್ಷಗಳ ದೂರದಲ್ಲಿರುವ ಏಕದಿನ ವಿಶ್ವಕಪ್ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರು.
2027ರ ಏಕದಿನ ವಿಶ್ವಕಪ್ ನಡೆಯುವ ಹೊತ್ತಿಗೆ ರೋಹಿತ್‌ಗೆ 40 ವರ್ಷ ವಯಸ್ಸಾಗಿದ್ದರೆ, ವಿರಾಟ್‌ಗೆ 38 ವರ್ಷ ವಯಸ್ಸಾಗಿರುತ್ತದೆ. ರೋಹಿತ್ ಅವರ ಫಿಟ್ನೆಸ್ ಮುಖ್ಯ ಕಾಳಜಿಯಾಗಿರುತ್ತದೆ. ಏಕೆಂದರೆ ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫೀಲ್ಡಿಂಗ್ ಮಾಡಿಲ್ಲ. ಮತ್ತೊಂದೆಡೆ ವಿರಾಟ್ ಅವರ ಸಾಮರ್ಥ್ಯ ಕಡಿಮೆಯಾಗುತ್ತಿರುವ ಲಕ್ಷಣಗಳನ್ನು ತೋರಿಸಿದ್ದಾರೆ. ಇದು ಅವರ ಬಹುತೇಕ ಎಲ್ಲ ಪಂದ್ಯಗಳಲ್ಲಿ ಅವರ ಇನ್ನಿಂಗ್ಸ್‌ನ ಆರಂಭಿಕ ಭಾಗಗಳಲ್ಲಿ ಅವರನ್ನು ತೊಂದರೆಗೆ ಸಿಲುಕಿಸಿದೆ. ಇನ್ನೊಂದೆಡೆ ಭಾರತ ಹೆಚ್ಚಾಗಿ ಟಿ20 ಸರಣಿಯನ್ನು ಆಡುತ್ತಿದೆ. ಕೊಹ್ಲಿ, ರೋಹಿತ್ ಈ ಮಾದರಿಯಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಉಭಯ ಆಟಗಾರರಿಗೆ ಬೆರಳೆಣಿಕೆಯ ಏಕದಿನ ಸರಣಿ ಆಡಲು ಸಿಗುತ್ತದೆ. ಆದ್ದರಿಂದ ಅವರು ಫಾರ್ಮ್ ಉಳಿಸಿಕೊಳ್ಳುವುದು ಕಷ್ಟ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದರು.
























