ಸುಳ್ಯ: 13 ವರ್ಷದ ಬಾಲಕಿ ಗರ್ಭಿಣಿ ಎಂದು ವರದಿ ಕೊಟ್ಟು ಎಡವಟ್ಟು ಮಾಡಿಕೊಂಡ ವೈದ್ಯ

ಗಂಭೀರ ಲೋಪ ಮಾಡಿದ ಡಾಕ್ಟರ್‌ ಕೂಡಲೇ ವರ್ಗಾವಣೆ, ತನಿಖೆಗೆ ಆದೇಶ

ಸುಳ್ಯ: ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಶಾಲಾ ಬಾಲಕಿಗೆ ವೈದ್ಯಾಧಿಕಾರಿಯೊಬ್ಬರು ಗರ್ಭಿಣಿ ಎಂದು ವರದಿ ನೀಡಿ ಎಡವಟ್ಟು ಮಾಡಿಕೊಂಡ ಆಘಾತಕಾರಿ ಘಟನೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ದೂರಿನ ಬೆನ್ನಲ್ಲೇ ಈ ವೈದ್ಯಾಧಿಕಾರಿಯನ್ನು ಇಲ್ಲಿಂದ ವರ್ಗಾಯಿಸಲಾಗಿದ್ದು, ಇಡೀ ಘಟನೆಯ ತನಿಖೆಗೆ ಆದೇಶಿಸಲಾಗಿದೆ.

ವೈದ್ಯಾಧಿಕಾರಿ ಎಡವಟ್ಟು ಮಾಡಿದ ವಿಚಾರವನ್ನು ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರರಿಗೆ ಹೇಳಿದ್ದು, ಈ ಸುಳ್ಳು ಮಾಹಿತಿ ಸಾರ್ವಜನಿಕವಾಗಿ ಹರಡಿದ ಕಾರಣ ನಮ್ಮ ಕುಟುಂಬಕ್ಕೆ ಭಾರಿ ಮಾನಸಿಕ ನೋವನ್ನುಂಟು ಮಾಡಿದೆ. ನನ್ನ ಮಗಳು ಈಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಬಾಲಕಿಯ ಹೆತ್ತವರು ದಾಖಲೆಯೊಂದಿಗೆ ದೂರು ನೀಡಿದ್ದಾರೆ.





















































 
 

ಶಾಲೆಯ ಸಹಪಾಠಿಗಳು, ಶಿಕ್ಷಕರು ಮತ್ತು ಸ್ಥಳೀಯರು ಬಾಲಕಿಯ ಮಾನಹಾನಿ ಮಾಡುತ್ತಿದ್ದಾರೆ. ಅಪ್ರಾಪ್ತ ಮಗಳಿಗೆ ತಪ್ಪು ವೈದ್ಯಕೀಯ ಮಾಹಿತಿ ನೀಡುವುದು ಹಾಗೂ ಅವಳ ಖಾಸಗಿ ಮಾಹಿತಿಯನ್ನು ಅನಧಿಕೃತವಾಗಿ ಬಹಿರಂಗಪಡಿಸುವುದು ಪೋಕ್ಸೊ ಕಾಯಿದೆ ಹಾಗೂ ಐ.ಪಿ.ಸಿ. ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಅಪರಾಧವಾಗಿರುತ್ತದೆ. ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಡಬ ತಾಲೂಕಿಗೆ ಒಳಪಟ್ಟ ಗ್ರಾಮವೊಂದರ 13 ವರ್ಷದ ಬಾಲಕಿಯನ್ನು ಜ್ವರದ ಹಿನ್ನೆಲೆಯಲ್ಲಿ ಆಕೆಯ ಹೆತ್ತವರು ಚಿಕಿತ್ಸೆಗಾಗಿ ಜುಲೈ 1ರಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿನ ಕರ್ತವ್ಯನಿರತ ವೈದ್ಯಾಧಿಕಾರಿ ಡಾ. ಮಂಜುನಾಥ್ ಬಾಲಕಿಯನ್ನು ಪರೀಕ್ಷಿಸಿ ಮೂತ್ರ ಮತ್ತು ರಕ್ತ ಪರೀಕ್ಷೆಗೆ ಲ್ಯಾಬ್ ಸ್ಲಿಪ್ ನೀಡಿದ್ದರು. ತಪಾಸಣೆಯ ನಂತರ ಹೊರರೋಗಿಗಳ ದಾಖಲಾತಿಯಲ್ಲಿ ಯುಪಿಟಿ ಪಾಸಿಟಿವ್ (ಗರ್ಭಿಣಿ) ಎಂದು ಬರೆದಿದ್ದು ಇನ್ನಷ್ಟು ತಪಾಸಣೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಈ ವರದಿಯಿಂದ ತಬ್ಬಿಬ್ಬುಗೊಂಡ ಹೆತ್ತವರು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಪರೀಕ್ಷೆ ಮಾಡಿಸಿದಾಗ ಮಗಳು ಗರ್ಭಿಣಿಯಾಗಿಲ್ಲ ಎಂಬ ವರದಿ ಲಭಿಸಿತ್ತು. ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಅಲ್ಲಿಯ ವೈದ್ಯರೂ ಕೂಡ ಗರ್ಭಧಾರಣೆಯ ಕುರಿತು ಯಾವುದೇ ದೃಢೀಕರಣ ನೀಡಿಲ್ಲ.

ದೂರಿನ ಬೆನ್ನಲ್ಲೇ ಅರಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ತನಿಖೆಗಾಗಿ ತಂಡವನ್ನು ರಚಿಸಿ ಪಂಜಕ್ಕೆ ಕಳುಹಿಸಿದ್ದು, ಜುಲೈ 10ರಂದು ಮಾಹಿತಿ ಸಂಗ್ರಹಿಸಿದ್ದಾರೆ. ಆರ್.ಸಿ.ಎಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗದ ಡಾ ರಾಜೇಶ್, ಜಿಲ್ಲಾ ಕ್ಷಯ ನಿವಾರಣಾಧಿಕಾರಿ ಡಾ. ದಿಲ್ಶಾದ್, ಜಿಲ್ಲಾ ಶುಶ್ರೂಷಣಾಧಿಕಾರಿ ಜೆಸಿ ಕೆ.ವಿ., ತಾಲೂಕು ಆರೋಗ್ಯಾಧಿಕಾರಿ ತ್ರಿಮೂರ್ತಿ ತಂಡದಲ್ಲಿದ್ದರು.

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ವಿರುದ್ಧ ಪೊಲೀಸ್‌ ದೂರು ದಾಖಲಾಗಿದ್ದು, ಅವರನ್ನು ಕೊಯಿಲಕ್ಕೆ ವರ್ಗಾವಣೆ ಮಾಡಲಾಗಿದೆ. ಕಳೆದ 13 ವರ್ಷಗಳಿಂದ ಪಂಜ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದರು.

error: Content is protected !!
Scroll to Top