ಪತಿಯಿಂದಲೇ ಹಲ್ಲೆಗೊಳಗಾದ ನಟಿ; ಆಸ್ಪತ್ರಗೆ ದಾಖಲು
ಬೆಂಗಳೂರು: ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿ ಮೇಲೆ ಪತಿಯೇ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್‌ನಲ್ಲಿ ನಡೆದಿದೆ.
ಮಂಜುಳ ಯಾನೆ ಶ್ರುತಿ ಚಾಕು ಇರಿತಕ್ಕೊಳಗಾದ ಕಿರುತೆರೆ ನಟಿ. ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಶ್ರುತಿ ನಟಿಸಿರುವ ನಟಿಯ ಮೇಲೆ ಜುಲೈ 4ರಂದು ಹಲ್ಲೆಯಾಗಿದ್ದ ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
20 ವರ್ಷದ ಹಿಂದೆ ಅಂಬರೀಶ್ ಎಂಬಾತನನ್ನು ಪ್ರೀತಿಸಿ ಶ್ರುತಿ ಮದುವೆಯಾಗಿದ್ದರು. ಮದುವೆಯಾಗಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಹನುಮಂತ ನಗರದಲ್ಲಿ ಲೀಸ್‌ಗೆ ಮನೆ ಪಡೆದು ದಂಪತಿ ವಾಸವಾಗಿದ್ದರು. ಕೆಲ ತಿಂಗಳಿನಿಂದ ಶ್ರುತಿ ನಡವಳಿಕೆ ಗಂಡ ಅಂಬರೀಶ್‌ಗೆ ಇಷ್ಟವಾಗುತ್ತಿರಲಿಲ್ಲ. ಶೀಲ ಶಂಕಿಸಿ ಜಗಳ ಮಾಡುತ್ತಿದ್ದ. ಇಬ್ಬರ ಮಧ್ಯೆ ಲೀಸ್ ಹಣಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಹಿಂದೆ ಶ್ರುತಿ ದೂರು ನೀಡಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಸರಿ ಇಲ್ಲದ ಕಾರಣ ಕಳೆದ ಏಪ್ರಿಲ್‌ನಲ್ಲಿ ಪತಿಯಿಂದ ದೂರವಾಗಿ ಅಣ್ಣನ ಮನೆಯಲ್ಲಿ ಶ್ರುತಿ ನೆಲೆಸಿದ್ದರು.
ಜುಲೈ 3ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಪತಿ, ಪತ್ನಿ ರಾಜಿಯಾಗಿ ಒಂದಾಗಿದ್ದರು. ಆದರೆ ಜುಲೈ 4ರಂದು ಮಕ್ಕಳು ಕಾಲೇಜಿಗೆ ಹೋಗಿದ್ದಾಗ ಪೆಪ್ಪರ್ ಸ್ಪ್ರೇ ಮಾಡಿ ಪತ್ನಿಯ ಕೊಲೆಗೆ ಅಂಬರೀಶ್ ಯತ್ನಿಸಿದ್ದಾನೆ. ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ತಲೆ ಕೂದಲು ಹಿಡಿದು ಗೋಡೆ ತಲೆ ಗುದ್ದಿಸಿ ಕೊಲೆಗೆ ಅಂಬರೀಶ್ ಯತ್ನಿಸಿದ್ದಾನೆ.
ಸಂಸಾರ ಮತ್ತು ಹಣಕಾಸು ವಿಚಾರಕ್ಕೆ ಕೊಲೆ ಯತ್ನ ಮಾಡಿರುವುದಾಗಿ ಶ್ರುತಿ ದೂರು ನೀಡಿದ್ದು, ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೊಲೆಯತ್ನ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಅಂಬರೀಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
























