ಮಂಗಳೂರು: ಲಂಚ ಸ್ವೀಕರಿಸಿದ ಐವರು ಪೊಲೀಸರು ಅಮಾನತು

ಅಪಘಾತವಾದ ಕಾರನ್ನು ಬಿಡುಗಡೆ ಮಾಡಲು 50 ಸಾವಿರ ಲಂಚ ಕೇಳಿದ್ದ ಪೊಲೀಸರು

ಮಂಗಳೂರು: ವಾಹನ ಪರವಾನಗಿ ಮರಳಿ ನೀಡಲು 50 ಸಾವಿರ ರೂ. ಲಂಚದ ಬೇಡಿಕೆಯಿರಿಸಿದ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ. ಲಂಚದ ಬೇಡಿಕೆಯಿರಿಸಿದ ಪ್ರಕರಣದಲ್ಲಿ ತಸ್ಲೀಂ ಹಾಗೂ ಸಹಕರಿಸಿದ ವಿನೋದ್ ನೇರ ಆರೋಪಿಗಳಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.
ತಸ್ಲೀಂ ಮತ್ತು ವಿನೋದ್ ಲಂಚ ಬೇಡಿಕೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮೌನವಹಿಸಿದ್ದ ಇತರ ಮೂವರನ್ನೂ ಕೂಡಾ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ ಕಾರೊಂದರ ದಾಖಲೆಯನ್ನು ದೂರುದಾರರಿಗೆ ವಾಪಾಸ್‌ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಕದ್ರಿ ಸಂಚಾರ ಠಾಣೆಯ ಸಿಬ್ಬಂದಿ ಗುರುವಾರ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತಸ್ಲೀಂ ಕದ್ರಿ ಸಂಚಾರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಆಗಿದ್ದರು. ದೂರುದಾರರಿಂದ 5,000 ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.





















































 
 

ದೂರುದಾರರ ಕಾರು ಮತ್ತು ಸ್ಕೂಟರ್ ನಡುವೆ ಇತ್ತೀಚೆಗೆ ನಂತೂರು ಸರ್ಕಲ್‌ನಲ್ಲಿ ಅಪಘಾತ ಉಂಟಾಗಿತ್ತು. ಈ ಕುರಿತು ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಸ್ಲೀಂ ಕಾರು ಮತ್ತು ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸೂಚಿಸಿದ್ದು, ಅದರಂತೆ ದೂರುದಾರರು ಕಾರು ಮತ್ತು ದಾಖಲಾತಿಗಳನ್ನು ಠಾಣೆಗೆ ಒಪ್ಪಿಸಿದ್ದರು. ಆ ನಂತರ ಕಾರನ್ನು ಠಾಣೆಯಿಂದ ಬಿಡಿಸಿಕೊಡಲು ಹೆಡ್‌ಕಾನ್‌ಸ್ಟೆಬಲ್ ತಸ್ಲೀಂ 50,000 ರೂ. ಲಂಚದ ಬೇಡಿಕೆ ಇಟ್ಟಿದ್ದ. ದೂರುದಾರರು ಈ ವಿಚಾರವನ್ನು ತನ್ನ ವಕೀಲರಲ್ಲಿ ತಿಳಿಸಿದ್ದು, ಅದರಂತೆ ವಕೀಲರು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟುಕೊಡುವಂತೆ ಕೇಳಿಕೊಂಡಿದ್ದಾರೆ. ಕಾರನ್ನು ಸ್ವೀಕರಿಸಲಾಗಿದೆ ಎಂದು ಸಹಿ ಪಡೆದಿದ್ದರೂ ಬಿಟ್ಟು ಕೊಟ್ಟಿಲ್ಲ. ಬಳಿಕ ದೂರುದಾರರ ಮೊಬೈಲನ್ನು ಬಲವಂತವಾಗಿ ಪಡೆದು ಕಾರು ಬಿಟ್ಟುಕೊಟ್ಟಿದ್ದಾರೆ.

ಮೊಬೈಲನ್ನು ಹಿಂದಿರುಗಿಸುವಂತೆ ಕೇಳಿದಾಗ 50,000 ರೂ. ಲಂಚಕ್ಕೆ ಮತ್ತೆ ಬೇಡಿಕೆ ಇಟ್ಟಿದ್ದಾರೆ. ಮೊಬೈಲ್ ಹಿಂತಿರುಗಿಸಬೇಕಾದರೆ ಒರಿಜಿನಲ್ ಲೈಸೆನ್ಸ್ ಅನ್ನು ಠಾಣೆಗೆ ತಂದುಕೊಡುವಂತೆ ತಿಳಿಸಿದ್ದಾರೆ. ಅದರಂತೆ ಒರಿಜಿನಲ್ ಲೈಸನ್ಸ್ ನೀಡಿದ್ದಾರೆ. ಬಳಿಕ ಠಾಣೆಯ ಇನ್ನೋರ್ವ ಸಿಬ್ಬಂದಿ ವಿನೋದ್ ಅವರಿಗೆ 30,000 ರೂ. ಲಂಚದ ಹಣ ಕೊಟ್ಟು ಒರಿಜಿನಲ್ ಲೈಸೆನ್ಸ್ ಪಡೆದುಕೊಂಡು ಹೋಗಲು ಸೂಚನೆ ನೀಡಿದ್ದಾರೆ.

ಜು.6ರಂದು ಠಾಣೆಗೆ ಹೋಗಿ ತಸ್ಲೀಂ ಅವರನ್ನು ಭೇಟಿಯಾಗಿ ಮಾತನಾಡಿದ್ದು, ಈ ವೇಳೆ ಒರಿಜಿನಲ್ ಲೈಸೆನ್ಸ್ ಕೊಡಬೇಕಾದರೆ 10,000 ರೂ. ತಂದು ಕೊಡುವಂತೆ ತಸ್ಲೀಂ ತಿಳಿಸಿದ್ದಾರೆ. ಅದಕ್ಕೆ ತನ್ನ ಬಳಿ 500 ರೂ. ಇದೆ ಎಂದಾಗ, 10,000 ರೂ. ಇಲ್ಲದೆ ಠಾಣೆ ಕಡೆ ಬರಬೇಡ ಎಂದು ಬೈದು ಕಳುಹಿಸಿದ್ದಾರೆ. ಕಡಿಮೆ ಮಾಡಿ ಎಂದಾಗ 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚ ನೀಡಲು ಇಚ್ಛಿಸದ ಕಾರಣ ಮಂಗಳೂರು ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ್ದು, ತಸ್ಲೀಂ ಮತ್ತು ವಿನೋದ್ ವಿರುದ್ಧ ಪ್ರಕರಣ ದಾಖಲಾಗಿತ್ತು.

error: Content is protected !!
Scroll to Top