ಕೈದಿಗಳಿಗೆ 300ಕ್ಕೂ ಅಧಿಕ ಮೊಬೈಲ್‌ ಮಾರಿದ್ದ ಮನೋವೈದ್ಯ ಡಾ.ನಾಗರಾಜ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರನಿಗೆ ನೆರವಾಗಿದ್ದ ವೈದ್ಯ

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಟಿ.ನಾಸಿರ್‌ಗೆ ನೆರವು ನೀಡಿದ್ದ ಮನೋವೈದ್ಯ ಡಾ.ನಾಗರಾಜ್‌ ನಾಸಿರ್‌ ಸೇರಿದಂತೆ ಹಲವು ಕೈದಿಗಳಿಗೆ 300ಕ್ಕೂ ಹೆಚ್ಚು ಮೊಬೈಲ್‌ ಪೂರೈಸಿದ್ದ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.

ಎಲ್​ಇಟಿ ಉಗ್ರ ಟಿ.ನಾಸೀರ್​​ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೆರವು ನೀಡಿದ್ದ ಪ್ರಕರಣ ಸಂಬಂಧ ಬಂಧಿತರ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ ತೀವ್ರಗೊಳಿಸಿದ್ದು, ಈ ಸಂದರಭದಲ್ಲಿ ಹಲವು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಬಂಧಿತ ಮನೋವೈದ್ಯ ಡಾ. ನಾಗರಾಜ್ ಹಾಗೂ ಎಎಸ್ಐ ಚಾಂದ್ ಪಾಷ ಬ್ಯಾಂಕ್ ಖಾತೆಗಳಿಗೆ ಬೇರೆಬೇರೆ ಮೂಲಗಳಿಂದ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಆರೋಪಿಗಳ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗಿದೆ.





















































 
 

ಕೋಟಿಗಟ್ಟಲೆ ವ್ಯವಹಾರ ಜೈಲಿನಲ್ಲಿ ನಡೆದಿದ್ದು, ಕಾಲೇಜು ವಿದ್ಯಾರ್ಥಿಯಾಗಿರುವ ಚಾಂದ್ ಪಾಷನ ಮಗನ ಖಾತೆಗೂ ಸುಮಾರು 30 ಲ.ರೂ. ವರ್ಗಾವಣೆಯಾಗಿತ್ತು. ಡಾ.ನಾಗರಾಜ್‌ ಕೈದಿಗಳಿಗೆ ಮೊಬೈಲ್‌ ಮಾರಿಯೇ ಸುಮಾರು 75 ಲಕ್ಷದಷ್ಟು ಗಳಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ವೈದ್ಯ ಡಾ ನಾಗರಾಜ್ ಆಪ್ತ ಸಹಾಯಕಿ ಪಲ್ಲವಿ ಖಾತೆಯಲ್ಲಿ 75 ಲಕ್ಷ ರೂಪಾಯಿ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಚಾಂದ್ ಪಾಷ ಮಗನ ಬ್ಯಾಂಕ್ ಖಾತೆಗೆ ಕೂಡ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಇಷ್ಟೇ ಅಲ್ಲದೆ ಗಿಫ್ಟ್ ರೂಪದಲ್ಲಿ ಬೆಲೆಬಾಳುವ ವಸ್ತುಗಳು ಸಂಗ್ರಹವಾಗಿದ್ದು ಕೂಡ ತಿಳಿದುಬಂದಿದೆ.

ಡಾ.ನಾಗರಾಜ್ ಚಿಕಿತ್ಸೆಗೆ ಬರುತ್ತಿದ್ದ ಕೈದಿಗಳಿಗೆ ಅವರ ಕುಟುಂಬದವರ ಜೊತೆ ಮಾತನಾಡಲು ವ್ಯವಸ್ಥೆ ಮಾಡುತ್ತಿದ್ದ. ಪ್ರತ್ಯೇಕ ಮೊಬೈಲ್ ಇಟ್ಟುಕೊಂಡು ಅದಕ್ಕೆ ಪ್ರತಿ ನಿಮಿಷದ ಲೆಕ್ಕದಲ್ಲಿ ಬಾಡಿಗೆ ನಿಗದಿಪಡಿಸಿದ್ದ ಎಂಬುದು ಎನ್​ಐಎ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಇದೀಗ ಬಂಧಿತ ಆರೋಪಿಗಳ ಇಂಟರ್ನೆಟ್ ಪ್ರೋಟೋಕಾಲ್ ಡೀಟೇಲ್ ಪಡೆಯಲು ಎನ್​ಐಎ ಸಿದ್ಧತೆ ಮಾಡಿಕೊಂಡಿದೆ.

ಮನೋವೈದ್ಯ ಡಾ ನಾಗರಾಜ್ 14 ವರ್ಷಗಳಿಂದ ಜೈಲಿನಲ್ಲಿ ಕೈದಿಗಳಿಗೆ 300ಕ್ಕೂ ಹೆಚ್ಚು ಮೊಬೈಲ್ ಮಾರಾಟ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ. 10,000 ರೂ. ಬೆಲೆಯ ಮೊಬೈಲ್ ಅನ್ನು ಆತ 35000-40,000 ರೂ.ಗೆ ಮಾರಾಟ ಮಾಡುತ್ತಿದ್ದ. ಹೀಗೆ ಮಾಡಿಯೇ ಸುಮಾರು 75 ಲಕ್ಷ ರೂಪಾಯಿ ಗಳಿಸಿದ್ದ ಎಂದು ಎನ್​ಐಎ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಮೂಲಗಳು ಹೇಳಿವೆ.

ಉಗ್ರ ಟಿ.ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ಸಂಚು ಹೂಡಿದ್ದ ಪ್ರಕರಣದಲ್ಲಿ ನಾಗರಾಜ್, ಚಾಂದ್ ಪಾಷಾ ಹಾಗೂ ಉಗ್ರ ಜುನೈದ್ ಅಹ್ಮದ್ ತಾಯಿ ಫಾತಿಮಾರನ್ನು 2 ದಿನಗಳ ಹಿಂದೆ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ನಾಸೀರ್​​​ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಗ್ರೆನೇಡ್ ಸ್ಫೋಟಿಸಿ ಪರಾರಿಯಾಗಲು ರೋಪಿಸಿದ್ದ ಸಂಚಿನಲ್ಲಿ ಚಾಂದ್ ಪಾಷಾ ಶಾಮೀಲಾಗಿದ್ದ ಎನ್ನಲಾಗಿದೆ. ಅದೃಷ್ಟವಶಾತ್, ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಆ ಸಂಚು ವಿಫಲವಾಗಿತ್ತು.

ಸಿನಿಮೀಯ ರೀತಿ ಪರಾರಿಯಾಗಲು ಸಂಚು

ಸಿನಿಮೀಯ ರೀತಿಯಲ್ಲಿ ನಾಸೀರ್ ತಪ್ಪಿಸಿಕೊಳ್ಳಲು ಸಂಚು ಸಿದ್ಧವಾಗಿತ್ತು. ಅದಕ್ಕೆ ಎಎಸ್​ಐ ಚಾಂದ್ ಪಾಷಾ ಪ್ರಮುಖ ಸೂತ್ರಧಾರರಾಗಿದ್ದ. ಚಾಂದ್ ಪಾಷಾಗೆ ನಾಸೀರ್‌ನನ್ನು ಕೋರ್ಟ್‌ಗೆ ಕರೆದೊಯ್ಯುವ ಜವಾಬ್ದಾರಿ ಇತ್ತು. ನಾಸೀರ್​​​ನನ್ನು ಕೋರ್ಟ್​​ಗೆ ಕರೆದೊಯ್ಯಲು ಒಂದು ಜೀಪ್, ಒಬ್ಬ ಇನ್ಸ್​​ಪೆಕ್ಟರ್ ಅಥವಾ ಪಿಎಸ್​ಐ ನಿಯೋಜನೆ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಮಾರ್ಗ ಮಧ್ಯೆ ಗ್ರೆನೇಡ್ ಸ್ಫೋಟಿಸಿ ಪೊಲೀಸರ ಗಮನ ಬೇರೆಡೆ ಸೆಳೆಯುವಂತೆ ಮಾಡಿ ನಾಸೀರ್ ಪರಾರಿಯಾಗುವಂತೆ ಮಾಡುವುದು ಸಂಚಿನ ಭಾಗವಾಗಿತ್ತು. ಈ ಎಲ್ಲ ಮಾಹಿತಿಯನ್ನು ಫಾತಿಮಾ ಮೂಲಕ ಉಗ್ರ ಜುನೈದ್​​​ಗೆ ರವಾನೆ ಮಾಡಲಾಗುತ್ತಿತ್ತು ಎಂಬುದನ್ನು ಎನ್​ಐಎ ಪತ್ತೆ ಮಾಡಿದೆ.

ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಮೂಲಕ ಸಂಚುಕೋರರಿಗೆ ಗ್ರೆನೇಡ್ ಪೂರೈಕೆಯಾಗುತ್ತಿತ್ತು. 2023ರಲ್ಲಿ ಸಿಸಿಬಿ ದಾಳಿ ಸಂದರ್ಭ ಕೊಡಿಗೆಹಳ್ಳಿ ಮನೆಯ ಅಲ್ಮೆರಾದಲ್ಲಿ ನಾಲ್ಕು ಗ್ರೆನೇಡ್​ಗಳು ಪತ್ತೆಯಾಗಿದ್ದವು. ಹೀಗಾಗಿ ಉಗ್ರರ ಸಂಚು ವಿಫಲವಾಗಿತ್ತು. ಜುನೈದ್, ಮೊಹಮ್ಮದ್ ಅರ್ಷದ್ ಖಾನ್, ಸುಹೈಲ್, ಫೈಜಲ್, ತಬ್ರೇಜ್, ಮುದಾಸಿರ್ ಎಂಬವರು ಸೇರಿಕೊಂಡು ಈ ಸಂಚು ರೂಪಿಸಿದ್ದು, ಎಎಸ್​ಐ ಚಾಂದ್ ಪಾಷಾ ನೆರವಿತ್ತು.

error: Content is protected !!
Scroll to Top