ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನಿಲುವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕಟುವಾಗಿ ಟೀಕಿಸುವ ಮೂಲಕ ಮತ್ತೆ ವಿವಾದ ಹುಟ್ಟು ಹಾಕಿದ್ದಾರೆ.
ತರೂರ್ ಅವರು ಮಲೆಯಾಳ ಪತ್ರಿಕೆಯೊಂದರಲ್ಲಿ ತುರ್ತು ಪರಿಸ್ಥಿತಿಯನ್ನು ಟೀಕಿಸಿ ಬರೆದಿರುವ ಲೇಖನವೊಂದು ವೈರಲ್ ಆಗಿದ್ದು, ಇದರಲ್ಲಿ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಎನ್ನುವುದು ಕರಾಳ ಅಧ್ಯಾಯ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನಡೆದ ದೌರ್ಜನ್ಯ, ಹಿಂಸಾಚಾರಗಳನ್ನು ಮರೆಯುವುದು ಅಸಾಧ್ಯ ಎಂದು ತಿಳಿಸಿದ್ದಾರೆ.
ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆ ಸಾಮಾಜಿಕ ಬದುಕನ್ನು ಭಯದ ವಾತಾವರಣಕ್ಕೆ ತಳ್ಳಿತು. ಈಗಿನ ಭಾರತ ತುರ್ತು ಪರಿಸ್ಥಿತಿ ಸಂದರ್ಭದ ಭಾರತ ಅಲ್ಲ ಎನ್ನುವ ಮೂಲಕ ಅವರು ಸ್ವಪಕ್ಷೀಯರ ಕೆಂಗಣ್ಣಿಗೆ ಮತ್ತೆ ಗುರಿಯಾಗಿದ್ದಾರೆ. ಇಂದಿರಾ ಗಾಂಧಿ ಬಲವಂತದ ಕಠಿಣ ಕ್ರಮಗಳನ್ನು ಜಾರಿಗೆ ತಂದರು. ಅವರ ಪುತ್ರ ಸಂಜಯ್ ಗಾಂಧಿ ಬಲವಂತದ ಸಂತಾನಹರಣ ಚಿಕಿತ್ಸೆ, ಹಿಂಸಾಚಾರ ಸೇರಿದಂತೆ ಭಯಾನಕ ಕ್ರೌರ್ಯಗಳನ್ನು ನಡೆಸಿದ್ದಾರೆ ಎಂದು ಅವರು ಬರೆದಿದ್ದಾರೆ.
























