ಕರ್ನಾಟಕದ ವಿಜಯಪುರದಲ್ಲಿ ತರಕಾರಿ ವ್ಯಾಪಾರಿ ಸೋಗಿನಲ್ಲಿ ತಲೆಮರೆಸಿಕೊಂಡಿದ್ದ ಉಗ್ರ
ಬೆಂಗಳೂರು: 1998ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಹಿಂದೆ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಕರ್ನಾಟಕದ ವಿಜಯಪುರದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಸಿದ್ದಿಕಿ ರಾಜ್ ಬಂಧಿತ ಆರೋಪಿ. ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದ ಸಿದ್ದಿಕಿ ರಾಜ್ ಹುಬ್ಬಳ್ಳಿಯ ಮಹಿಳೆಯನ್ನು ವಿವಾಹವಾಗಿ ಕಳೆದ 12 ವರ್ಷಗಳಿಂದ ವಿಜಯಪುರದಲ್ಲಿ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ.
1998ರ ಫೆಬ್ರವರಿ 14ರಂದು ಕೊಯಮತ್ತೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದ್ದವು. ಸ್ಫೋಟದಲ್ಲಿ 59 ಜನರು ಮೃತಪಟ್ಟಿದ್ದು, 231 ಜನರು ಗಾಯಗೊಂಡಿದ್ದರು. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಸ್ಫೋಟದ ಬಳಿಕ ತಮಿಳುನಾಡಿನಿಂದ ತಲೆಮರೆಸಿಕೊಂಡಿದ್ದ ಸಿದ್ದಿಕಿ ರಾಜ್ ಕಳೆದ 27 ವರ್ಷಗಳಿಂದ ವಿವಿಧೆಡೆ ವಾಸವಾಗಿದ್ದ. ಬೇರೆ ಬೇರೆ ಸ್ಥಳಗಳಲ್ಲಿ ಅಡಗಿದ್ದ ಆರೋಪಿ ಸಿದ್ದಿಕಿ ರಾಜ್ ಕೊನೆಗೆ ವಿಜಯಪುರ ನಗರದಲ್ಲಿ ಠಿಕಾಣಿ ಹೂಡಿದ್ದ. ಕೊಯಮತ್ತೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಿದ್ದಿಕಿಯನ್ನು ಐದನೇ ಕ್ರಿಮಿನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶೆ ವರ್ಜಿನ್ ವೆಸ್ಟಾ ಅವರು ಅಲ್ ಉಮ್ಮಾ ಚಳವಳಿಯ ಸದಸ್ಯ ಜುಲೈ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಬಳಿಕ ಆತನನ್ನು ಬಿಗಿ ಭದ್ರತೆಯಲ್ಲಿ ಕೊಯಮತ್ತೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಆರೋಪಿ ಸಿದ್ದಿಕಿ ರಾಜ್ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಬಂಧಿತ ಆರೋಪಿ ವಿರುದ್ಧ ಕೋಮು ಗಲಭೆ, ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳಿವೆ. ಸಿದ್ದಿಕ್ ರಾಜ್ ಬಂಧನದ ಮೂಲಕ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೂರನೇ ಪ್ರಮುಖ ಆರೋಪಿ ಸೆರೆಯಾದಂತಾಗಿದೆ. ಕೆಲವು ವಾರಗಳ ಹಿಂದೆಯಷ್ಟೇ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳಾದ ಅಬೂಬಕರ್ ಸಿದ್ದಿಕ್ ಮತ್ತು ಮೊಹಮ್ಮದ್ ಅಲಿ ಆಲಿಯಾಸ್ ಯೂನಸ್ನನ್ನು ಆಂಧ್ರ ಪ್ರದೇಶದಲ್ಲಿ ಬಂಧಿಸಲಾಗಿತ್ತು.
1998ರ ಫೆಬ್ರವರಿ 14 ರಂದು ಕೊಯಮತ್ತೂರಿನ ಆರ್.ಎಸ್. ಪುರಂನಲ್ಲಿ ಬಿಜೆಪಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು. ಪಕ್ಷದ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರು ಸಭೆಯಲ್ಲಿ ಭಾಗವಹಿಸಿ ಮಾತನಾಡಬೇಕಿತ್ತು. ಆ ಸಮಯದಲ್ಲಿ, ಸಾರ್ವಜನಿಕ ಸಭೆಯ ವೇದಿಕೆಯಿಂದ 100 ಮೀಟರ್ ದೂರದಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತ್ತು.
ಅಡ್ವಾಣಿ ಅವರು ಬರಬೇಕಿದ್ದ ವಿಮಾನ ವಿಳಂಬವಾದ ಕಾರಣ ಸ್ಫೋಟ ಘಟನೆಯಿಂದ ತಪ್ಪಿಸಿಕೊಂಡು ಬದುಕುಳಿದಿದ್ದರು. ನಂತರ ಕೊಯಮತ್ತೂರಿನ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದು, ಇದರಲ್ಲಿ 58 ಜನರು ಸಾವಿಗೀಡಾಗಿದ್ದರು. 250ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.
























