ತನಗೆ ಕೌನ್ಸೆಲಿಂಗ್ ಮಾಡುತ್ತಿದ್ದ ಮನೋವೈದ್ಯನನ್ನು ಉಗ್ರ ಕೃತ್ಯಕ್ಕೆ ಬಳಸಿಕೊಂಡ ಭಯೋತ್ಪಾದಕ ನಾಸಿರ್
ಬೆಂಗಳೂರು: ಪಾತಕ ಕೃತ್ಯಗಳನ್ನು ಎಸಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕೈದಿಗಳ ಮನಪರಿವರ್ತನೆ ಮಾಡಿ ಅವರು ಮತ್ತೆ ಅಪರಾಧ ಲೋಕದತ್ತ ಹೋಗಬಾರದು, ಉತ್ತಮ ನಾಗರಿಕರಾಗಿ ಬಾಳಬೇಕೆಂಬ ಉದ್ದೇಶದಿಂದ ಜೈಲಿಗೆ ಮನೋವೈದ್ಯರನ್ನು ನೇಮಿಸಲಾಗುತ್ತದೆ. ಇವರ ಮುಖ್ಯ ಧ್ಯೇಯವೇ ಕೈದಿಗಳ ಮನಸ್ಸನ್ನು ಪರಿವರ್ತಿಸಿ ಮನಸ್ಸಿನಲ್ಲಿ ಪ್ರಾಯಶ್ಚಿತ್ತ ಪ್ರಜ್ಞೆ ಮೂಡಿಸಿ ಬಿಡುಗಡೆಯಾಗಿ ಹೋದ ಬಳಿಕ ಮತ್ತೆ ಅಪರಾಧಗಳನ್ನು ಮಾಡದಂತೆ ತಡೆಯುವುದು. ಆದರೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಮಾತ್ರ ಉಲ್ಟಾ ಆಗಿದೆ. ಇಲ್ಲಿ ಮನೋವೈದ್ಯನೇ ಉಗ್ರನಿಂದ ಬ್ರೈನ್ವಾಶ್ಗೊಳಗಾಗಿ ಅಪರಾಧಕ್ಕೆ ಸಾಥ್ ನೀಡಿದ್ದಾನೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ರಾತ್ರಿ ದಾಳಿ ಮಾಡಿ ಬಂಧಿಸಿರುವ ಪರಪ್ಪನ ಅಗ್ರಹಾರದ ಜೈಲಿನ ಮನೋವೈದ್ಯ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಡಾ.ನಾಗರಾಜ್ ಈ ಜೈಲಲ್ಲಿರುವ ಲಷ್ಕರ್ ಎ ತಯ್ಯಬದ ಉಗ್ರ ಟಿ.ನಾಸಿರ್ನಿಂದ ಬ್ರೈನ್ವಾಶ್ಗೆ ಒಳಗಾಗಿ ಅವನಿಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ಕೊಟ್ಟು ಸಹಕರಿಸಿದ ಆಘಾತಕಾರಿ ವಿಚಾರ ತನಿಖೆ ವೇಳೆ ತಿಳಿದುಬಂದಿದೆ.
ಜೀವಾವಧಿ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಲ್ಲಿರುವ ಲಷ್ಕರ್ ತೊಯ್ಬಾ ಸಂಘಟನೆಯ ಉಗ್ರ ಕೇರಳದ ಟಿ.ನಾಸೀರ್ಗೆ ಜೈಲಿನಲ್ಲಿ ನೆರವು ನೀಡಿದ ಆರೋಪದ ಮೇಲೆ ಎನ್ಐಎ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಜೈಲಿನ ಮನೋವೈದ್ಯ ನಾಗರಾಜ್, ಸಿಎಆರ್ ಸಬ್ಇನ್ಸ್ಪೆಕ್ಟರ್ ಚಾಂದ್ ಪಾಷಾ ಹಾಗೂ ಗ್ರೆನೇಡ್ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಜುನೈದ್ನ ತಾಯಿ ಅನೀಸ್ ಫಾತಿಮಾ ಸೇರಿದ್ದಾಳೆ.
ಡಾ.ನಾಗರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಈತ ಜೈಲಿನಲ್ಲಿ ಎಲ್ಲ ಖೈದಿಗಳನ್ನು ಭೇಟಿಯಾಗಿ ಕೌನ್ಸೆಲಿಂಗ್ ಮಾಡುತ್ತಿದ್ದ. ಹೀಗೆ 2022 -2023ರ ಅವಧಿಯಲ್ಲಿ ಉಗ್ರ ನಾಸೀರ್ ಇರುವ ಬ್ಯಾರಕ್ಗೆ ತೆರಳಿ ಕೌನ್ಸೆಲಿಂಗ್ ಮಾಡುತ್ತಿದ್ದ. ಈ ವೇಳೆ ನಾಸೀರ್ ಮನೋವೈದ್ಯನ ಮನಸ್ಸನ್ನೇ ಬ್ರೈನ್ವಾಶ್ ಮಾಡಿ ತನ್ನ ಉಗ್ರ ಕೃತ್ಯಕ್ಕೆ ಸಹಕಾರ ನೀಡಲು ಒಪ್ಪಿಸಿದ್ದಾನೆ. ನಂತರ ಡಾ.ನಾಗರಾಜ್, ಆತನಿಗೆ ಮೊಬೈಲ್ ಫೋನ್ ಕೊಟ್ಟು ಸಹಕಾರ ನೀಡ ತೊಡಗಿರುವುದು ತನಿಖೆಯಿಂದ ತಿಳಿದುಬಂದಿದೆ. ನಟೋರಿಯಸ್ ಉಗ್ರನಿಗೆ ನೆರವು ನೀಡಿದ ಜೈಲಿನ ಮನೋವೈದ್ಯ ಸೇರಿ ಮೂವರನ್ನು 6 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಮೂವರು ಶಂಕಿತರು ಕೇರಳ ಮೂಲದ ಎಲ್ಇಟಿ ಉಗ್ರ ಟಿ.ನಾಸೀರ್ ಜೊತೆ ನೇರ ಸಂಪರ್ಕ ಹೊಂದಿದ್ದು, ಜೈಲಿನಲ್ಲಿ ಮೊಬೈಲ್ ಪೋನ್, ಹಣಕಾಸು ಸೇರಿ ಇತರ ವಿಚಾರಗಳ ಬಗ್ಗೆ ನೆರವು ನೀಡಿದ್ದರು. ಮಂಗಳವಾರ ರಾತ್ರಿ ಬೆಂಗಳೂರಿನ ಮೂರು ಹಾಗೂ ಕೋಲಾರದ ಐದು ಕಡೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.
ಮತ್ತೊಬ್ಬ ಆರೋಪಿ ಅನೀಸ್ ಫಾತಿಮಾ ಶಂಕಿತ ಉಗ್ರ ಜುನೈದ್ ಎಂಬಾತನ ತಾಯಿ. 2023ರಲ್ಲಿ ಜುನೈದ್ ಮೇಲೆ ಕೇಸ್ ಬೀಳುತ್ತಿದ್ದಂತೆ ಆತ ನಾಪತ್ತೆಯಾಗಿದ್ದ. ಟಿ.ನಾಸೀರ್ ಮತ್ತು ಜುನೈದ್ ನಡುವಿನ ಹಣದ ವ್ಯವಹಾರಕ್ಕೆ ತಾಯಿ ಸಹಾಯ ಮಾಡುತ್ತಿದ್ದಳು ಎಂದು ಗೊತ್ತಾಗಿದೆ. ಜೈಲಿನಲ್ಲಿ ಭೇಟಿಯ ವಿಚಾರಗಳನ್ನು ಮಗನಿಗೆ ಫಾತಿಮಾ ತಲುಪಿಸುತ್ತಿದ್ದಳು.
ಮೂರನೇ ಆರೋಪಿ ಎಎಸ್ಐ ಚಾಂದ್ ಪಾಷಾ ನಗರದ ಸಿಎಆರ್ನಲ್ಲಿ ಕೆಲಸ ಮಾಡುತ್ತಿದ್ದ. ಜೈಲಿನಿಂದ ಖೈದಿಗಳನ್ನು ಬೇರೆ ಜೈಲಿಗೆ ಮತ್ತು ನ್ಯಾಯಾಲಯಕ್ಕೆ ಕರೆತರುವ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಈ ವೇಳೆ ಉಗ್ರ ನಾಸೀರ್ ಪರಿಚಯ ಮಾಡಿಕೊಂಡಿದ್ದ ಚಾಂದ್ ಪಾಷಾ, ಬೇರೆ ಬೇರೆ ಕಡೆ ಪ್ರಯಾಣ ಮಾಡುವಾಗ ಸಹಾಯ ಮಾಡುವುದು, ನಾಸೀರ್ಗೆ ಬೇಕಿದ್ದ ಮಾಹಿತಿಗಳನ್ನು ವಿನಿಮಯ ಮಾಡುತ್ತಿದ್ದನಂತೆ. ಹೀಗೆ ಮೂರು ಜನ ಆರೋಪಿಗಳು ನೇರವಾಗಿ ನಾಸೀರ್ಗೆ ಲಿಂಕ್ ಇರೋದು ಎನ್ಐಎ ತನಿಖೆಯಲ್ಲಿ ಪತ್ತೆಯಾಗಿದೆ.
ಹಣದಾಸೆಗೆ ಬಿದ್ದಿದ್ದ ಮನೋವೈದ್ಯ ಡಾ.ನಾಗರಾಜ್ ಉಗ್ರ ನಾಸಿರ್ ಅಲ್ಲದೆ ಇತರ ಖೈದಿಗಳಿಗೂ ಮೊಬೈಲ್ ಕೊಟ್ಟಿರುವ ಮಾಹಿತಿ ತಿಳಿದುಬಂದಿದೆ. ಮೂರ್ನಾಲ್ಕು ಸಾವಿರದ ಮೊಬೈಲ್ಗಳನ್ನ 50,000 ಮಾರಾಟ ಮಾಡುತ್ತಿನಂತೆ. ಇದಕ್ಕಾಗಿ ತನ್ನ ಆಪ್ತೆ ಪವಿತ್ರಾ ಎಂಬಾಕೆಯನ್ನು ಬಳಸಿಕೊಂಡು ನೂರಾರು ಮೊಬೈಲ್, ಸಿಮ್ಗಳನ್ನು ಖರೀದಿ ಮಾಡಿ ಜೈಲಲ್ಲಿ ಮಾರಾಟ ಮಾಡಿರೋದು ಬೆಳಕಿದೆ ಬಂದಿದೆ. ಸಿಮ್ ಪಡೆಯಲು ಕೋಲಾರದ ಸತೀಶ್ ಗೌಡನ ಐಡಿ ಪ್ರೂಫ್ ಬಳಕೆಯಾಗಿದ್ದು, ಸತೀಶ್ ಗೌಡ ತಪ್ಪಿಸಿಕೊಂಡಿದ್ದಾನೆ. ಸತೀಶ್ನ ಪತ್ನಿ ಮತ್ತೆ ಅತ್ತೆ ನಿನ್ನೆ ಎನ್ಐಎ ವಿಚಾರಣೆಗೆ ಹಾಜರಾಗಿದ್ದಾರೆ.
























