ಇಲಾಖೆಯ ಸೂಚನೆ ಮುರಿದರೆ ಶಿಸ್ತು ಕ್ರಮದ ಎಚ್ಚರಿಕೆ
ಮೊಟ್ಟೆಯ ಹೆಚ್ಚುವರಿ ಹಣವನ್ನು ಭರಿಸುವುದೇ ಶಿಕ್ಷಕರಿಗೆ ಸವಾಲು
ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರದ ಆರು ದಿನವೂ ಮೊಟ್ಟೆ ವಿತರಣೆ ಮಾಡುವುದು, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡುವಂತೆ ಆದೇಶ ಇದ್ದರೂ, ಕೆಲವು ಶಾಲೆಗಳು ವಾರದಲ್ಲಿ ಮೂರು ಅಥವಾ ಎರಡು ದಿನ ಮಾತ್ರವೇ ಮಕ್ಕಳಿಗೆ ಮೊಟ್ಟೆ ನೀಡುವ ಕೆಲಸ ಮಾಡುತ್ತಿದೆ. ಶಾಲಾ ಹಂತದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸೂಚಿಸಿದೆ.
ಕೆಲವು ಶಾಲೆಗಳ ಎಸ್ಡಿಎಂಸಿಯವರು ಸಭೆ ಮಾಡಿದ ವಿದ್ಯಾರ್ಥಿಗಳಿಗೆ ಎರಡು ದಿನ ಮೊಟ್ಟೆ, ಮೂರು ದಿನ ಮೊಟ್ಟೆ ಎನ್ನುವ ತೀರ್ಮಾನಗಳನ್ನು ಕೈಗೊಂಡಿದ್ದರು. ಈ ಬಗ್ಗೆ ಮಕ್ಕಳ ಪೋಷಕರ ಬಳಿಯೂ ಶಾಲೆಗಳು ಒಪ್ಪಿಗೆ ಪತ್ರ ಪಡೆದಿದ್ದವು. ಹೀಗಿದ್ದರೂ ಈ ತೀರ್ಮಾನ ಸಮ್ಮತವಲ್ಲ, ಇದೊಂದು ಏಕಪಕ್ಷೀಯ ನಿರ್ಧಾರ ಎಂದು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವಲ್ಲಿ ಹಿನ್ನಡೆಯಾದ ಪಕ್ಷದಲ್ಲಿ ಸಂಬಂಧಪಟ್ಚವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ಎಚ್ಚರಿಸಿದೆ.
ಮೊಟ್ಟೆ ದರ ಏರಿಕೆಯ ಕಾರಣದಿಂದ ನಿತ್ಯವೂ ಮಕ್ಕಳಿಗೆ ಮೊಟ್ಟೆ ವಿತರಿಸುವ ಪ್ರಕ್ರಿಯೆ ಕಷ್ಟವಾಗಿ ಪರಿಣಮಿಸುತ್ತಿದೆ. ಸರ್ಕಾರ ಒಂದು ಮೊಟ್ಚೆಗೆ ಕೇವಲ 5 ರೂ. ಮಾತ್ರವೇ ನೀಡುತ್ತಿದೆ. ಆದರೆ ಮಾರುಕಟ್ಟೆಗಳಲ್ಲಿ ಒಂದು ಮೊಟ್ಟೆಯ ಬೆಲೆ 7 ರೂ. ವರೆಗೆ ಇದೆ. ಸರ್ಕಾರ ನೀಡಿದ ಹಣದಲ್ಲಿ ಮೊಟ್ಟೆ ಖರೀದಿ ಸಮರ್ಪಕವಾಗಿ ನಡೆಯದ ಕಾರಣ ಹೆಚ್ಚುವರಿ ಹಣವನ್ನು ಶಿಕ್ಷಕರೇ ಭರಿಸಬೇಕಾದ ಸವಾಲು ನಿರ್ಮಾಣವಾಗಿದೆ.
























