ಪುತ್ತೂರು: ಮಂಗಳೂರು ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದಲ್ಲಿ, ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದಲ್ಲಿ ತಯಾರಾದ ‘ ಧರ್ಮ ಚಾವಡಿ’ ತುಳು ಚಿತ್ರ ಜು.11 ರಂದು ದ.ಕ ಹಾಗೂ ಉಡುಪಿ ಜಿಲ್ಲಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧರ್ಮ ದೈವ ಚಿತ್ರ ಬಳಿಕ ಇದು ಎರಡನೇ ಚಿತ್ರವಾಗಿದ್ದು, ಧರ್ಮ ಚಾವಡಿ ಈಗಾಗಲೇ ಮುಂಬೈಯಲ್ಲಿ ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಚಿತ್ರಕ್ಕೆ ಪ್ರಸಾದ್ ಕೆ. ಶೆಟ್ಟಿ ಸಂಗೀತ ನೀಡಿದ್ದು, ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಪುತ್ತೂರು ಛಾಯಾಗ್ರಹಣದಲ್ಲಿ ಸಹಕರಿಸಿದ್ದು, ರಜಾಕ್ ಪುತ್ತೂರು ಚಿತ್ರಕತೆ ಬರೆದಿದ್ದಾರೆ. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನಾಯಕಿ ನಟಿಯಾಗಿ ಧನ್ಯ ಪೂಜಾರಿ ನಟಿಸಿದ್ದಾರೆ. ಉಳಿದಂತೆ ರವಿ ಸ್ನೇಹಿತ್, ಚೇತನ್ ರೈ ಮಾಣಿ, ಸುರೇಶ್ ರೈ, ಪ್ರಕಾಶ್ ಧರ್ಮನಗರ, ದೀಪಕ್ ರೈ ಪಾಣಾಜೆ, ಸುಂದರ್ ರೈ ಮಂದಾರ, ರಂಜನ್ ಬೋಲೂರು, ಮನೀಶ್ ಶೆಟ್ಟಿ ಸಿದ್ಧಕಟ್ಟೆ, ರಕ್ಷಣ್ ಮಾಡೂರು, ರೂಪ ಡಿ. ಶೆಟ್ಟಿ, ಸವಿತಾ ಅಂಚನ್, ನೇಹಾ ಕೋಟ್ಯಾನ್, ನಿಶ್ಮಿತಾ ಶೆಟ್ಟಿ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ ಎಂದು ತಿಳಿಸಿದರು.
ಚಿತ್ರೀಕರಣ ಈಶ್ವರಮಂಗಲದ ದೇಲಂಪಾಡಿಯ ಮನೆಯೊಂದರಲ್ಲಿ ನಡೆದಿದೆ. ಪದ್ಯಗಳ ಶೂಟಿಂಗನ್ನು ನೀಲೇಶ್ವರದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕಿ ನಟಿ ಧನ್ಯ ಪೂಜಾರಿ, ನಿರ್ಮಾಪಕ ಜಗದೀಶ್ ಅಮೀನ್, ಅರುಣ್ ರೈ ಪುತ್ತೂರು, ದಯಾನಂದ ರೈ ಬೆಟ್ಟಂಪಾಡಿ, ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.
























