ಬೆಂಗಳೂರಿನಲ್ಲಿ ವಿದ್ವಂಸಕ್ಕೆ ಕೃತ್ಯಕ್ಕೆ ಸಂಚು ಮಾಡಿದ್ದ ಉಗ್ರರು

ಜೈಲಿನಲ್ಲಿದ್ದುಕೊಂಡೆ ಉಗ್ರರ ಸ್ಲೀಪರ್‌ ಸೆಲ್‌ ಕಟ್ಟಿದ್ದ ನಾಸೀರ್‌

ಬೆಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿನ್ನೆ ರಾತ್ರಿ ಬೆಂಗಳೂರು ಮತ್ತು ಕೋಲಾರದ ಐದು ಕಡೆಗಳಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ ಬಳಿಕ ಬೆಂಗಳೂರಿನಲ್ಲಿ ಉಗ್ರಜಾಲ ವ್ಯವಸ್ಥಿತವಾಗಿ ಬೆಳೆಯುತ್ತಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮಂಗಳವಾರ ರಾತ್ರಿ ಬೆಂಗಳೂರು, ಕೋಲಾರದಲ್ಲಿ ದಿಢೀರ್ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರನೊಬ್ಬನ ತಾಯಿ ಅನೀಸ್‌ ಫಾತಿಮಾಳನ್ನು ಬಂಧಿಸಲಾಗಿದೆ. ಈ ಮೂವರಿಗೆ ಮಂಗಳೂರಿನ ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಸ್ಫೋಟ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಭವಿಸಿದ ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ನಾಸೀರ್ ಜತೆ ಪ್ರಬಲವಾದ ಸಂಪರ್ಕ ಇತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.





















































 
 

ಜೈಲಿನಲ್ಲಿದ್ದುಕೊಂಡೆ ಉಗ್ರ ಚಟುವಟಿಕೆಗಳ ಬಗ್ಗೆ ನಾಸೀರ್​ ಸಂಚು ಹೂಡುತ್ತಿದ್ದ. ಜೈಲಿನಿಂದಲೇ ಯುವಕರ ತಂಡ ತಯಾರು ಮಾಡುತ್ತಿದ್ದ. ದಕ್ಷಿಣ ಭಾರತದಲ್ಲಿ ನಡೆದ ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ಈತನಾಗಿದ್ದು, ಹಲವು ಕೇಸ್​ಗಳಲ್ಲಿ ಈತನ ಕೈವಾಡವಿದೆ ಎಂಬುದು ಎನ್​ಐಎ ತನಿಖೆಯಲ್ಲಿ ತಿಳಿದುಬಂದಿದೆ. ಸ್ಲೀಪರ್ ಸೆಲ್ ಜತೆ ನೇರ ಸಂಪರ್ಕ ಹೊಂದಿರುವ ಉಗ್ರ ನಾಸೀರ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ. ಅದಕ್ಕಾಗಿ ಜೈಲಿನಲ್ಲಿ ಇದ್ದುಕೊಂಡೇ ಯುವಕರ ತಂಡ ಕಟ್ಟಿದ್ದ ಎನ್ನಲಾಗಿದೆ.

ಕೊಲೆ ಕೇಸ್​​ನಲ್ಲಿ ಶಾಮೀಲಾಗಿದ್ದ ಯುವಕರ ತಂಡ ಕಟ್ಟಿದ್ದ. ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಇರುವ ತಂಡ ರೆಡಿ ಮಾಡಿದ್ದ. ಈ ತಂಡ ಗ್ರೆನೇಡ್, ಪಿಸ್ತೂಲ್, ಸ್ಫೋಟಕ ವಸ್ತುಗಳ ಸಮೇತ ಬೆಂಗಳೂರಿನ ಆರ್​.ಟಿ.ನಗರ, ಹೆಬ್ಬಾಳದಲ್ಲಿ ಸಿಕ್ಕಿ ಬಿದ್ದಿತ್ತು. ಪ್ರಮುಖ ಆರೋಪಿ ಜುನೈದ್​ಗಾಗಿ ಎನ್​ಐಎ ಹುಡುಕಾಟ ನಡೆಸುತ್ತಿದೆ. ಈ ವಿಚಾರ ಸಂಬಂಧ ದಾಳಿ ನಡೆಸಿದಾಗ ಡಾ. ನಾಗರಾಜ್, ಚಾಂದ್ ಪಾಷಾ ಹಾಗೂ ಅನೀಸ್‌ ಫಾತೀಮಾ ಸಿಕ್ಕಿಬಿದ್ದಿದ್ದಾರೆ.

ಡಾ.ನಾಗರಾಜ್‌ 4-5 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯರಾಗಿ ಕೆಲಸ ಮಾಡುತ್ತಿದ್ದು, ಉಗ್ರ ಟಿ.ನಾಸೀರ್ ಸೇರಿದಂತೆ ಕೈದಿಗಳಿಗೆ ಸಹಾಯಕಿ ಪವಿತ್ರಾ ಜೊತೆ ಸೇರಿ ಮೊಬೈಲ್ ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಎಎಸ್‌ಐ ಚಾಂದ್ ಪಾಷಾ, ನಾಸೀರ್​​ನನ್ನು ಜೈಲಿನಿಂದ ಯಾವ್ಯಾವ ಕೋರ್ಟ​​​ಗೆ ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿ ಸೋರಿಕೆ ಮಾಡುತ್ತಿದ್ದ. ಟಿ.ನಾಸೀರ್ ಸೇರಿದಂತೆ ಆತನಿಗೆ ಸಂಪರ್ಕ ಇರುವ ಸಂಘಟನೆಗಳ ಸದಸ್ಯರಿಗೆ ಮಾಹಿತಿ ನೀಡಿದ್ದ. ನಾಪತ್ತೆಯಾಗಿರುವ ಉಗ್ರ ಜುನೈದ್ ಅಹ್ಮದ್‌ನ ತಾಯಿ ಅನೀಸ್ ಫಾತೀಮಾ, ಟಿ.ನಾಸೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದಳು. ಲಷ್ಕರ್‌ಗೆ ಫಂಡ್ ಸಂಗ್ರಹಿಸುವ ಬಗ್ಗೆ ಈಕೆಗೆ ನಾಸೀರ್ ಮಾಹಿತಿ ನೀಡುತ್ತಿದ್ದ. ಈ ಮಾಹಿತಿಯನ್ನು ವಿದೇಶದಲ್ಲಿದ್ದ ಮಗ ಜುನೈದ್‌ಗೆ ಫಾತೀಮಾ ತಿಳಿಸಿದ್ದಳು.

ಈ ಪ್ರಕರಣದಲ್ಲಿ ಸಿಮ್ ಕಾರ್ಡ್​​ಗಳನ್ನು ಪೂರೈಕೆ ಮಾಡಿರುವ ಆರೋಪದ ಮೇಲೆ ವೈಟ್​​​ಫೀಲ್ಡ್ ಬಳಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ಮೂಲದ ಸತೀಶ್ ಗೌಡ ಎಂಬಾತನಿಗೂ ಎನ್​ಐಎ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ. ಬಂಧಿತರ ಮನೆಗಳಿಂದ ಚಿನ್ನಾಭರಣ ಸೇರಿದಂತೆ ಕೆಲವು ಡಿಜಿಟಲ್ ಉಪಕರಣಗಳು, ದಾಖಲೆಗಳನ್ನು ಎನ್​ಐಎ ವಶಕ್ಕೆ ಪಡೆದಿದೆ.

error: Content is protected !!
Scroll to Top