ಊರವರ ಬಹುಕಾಲದ ಬೇಡಿಕೆ ಈಡೇರಿಕೆ ; ಬಸ್ಗೆ ಸಂಭ್ರಮದ ಸ್ವಾಗತ
ಸುಳ್ಯ: ತಾಲೂಕಿನ ಮಡಪ್ಪಾಡಿಯಲ್ಲಿ ರಾತ್ರಿ ಹಾಲ್ಟ್ ಆಗುವ ಸರ್ಕಾರಿ ಬಸ್ ಸೇವೆ ಆರಂಭವಾಗಿದ್ದು, ಈ ಮೂಲಕ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿದೆ. 2019-20ರಲ್ಲಿ ಕೊರೋನ ಸಾಂಕ್ರಾಮಿಕ ಬಾಧಿಸಿದ ಸಂದರ್ಭ ಸ್ಥಗಿತಗೊಂಡಿದ್ದ ಮಡಪ್ಪಾಡಿಯ ಸರಕಾರಿ ಬಸ್ ಇದೀಗ ಪುನರಾರಂಭಗೊಂಡಿದೆ.
ಮಡಪ್ಪಾಡಿ ಸುಮಾರು 1600 ಜನಸಂಖ್ಯೆ ಇರುವ ಈ ಊರು. ಈ ಊರಿಗೆ ಸಾರಿಗೆಯದ್ದೇ ದೊಡ್ಡ ಸವಾಲು. ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಇದೀಗ ಸಾಯಂಕಾಲ 6.30ಕ್ಕೆ ಸುಳ್ಯದಿಂದ ಹೊರಟು ಎಲಿಮಲೆ – ಸೇವಾಜೆ ಮಾರ್ಗವಾಗಿ ಮಡಪ್ಪಾಡಿಗೆ 7.30ಕ್ಕೆ ತಲುಪಿ ಅಲ್ಲಿ ತಂಗಿ ಮರುದಿನ ಮುಂಜಾನೆ 7ಕ್ಕೆ ಸುಳ್ಯಕ್ಕೆ ಮರಳುವ ಸರಕಾರಿ ಬಸ್ ಸೇವೆ ಆರಂಭವಾಗಿದೆ. ಈ ಮೂಲಕವಾಗಿ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ.
ಈ ಬಸ್ಗೆ ಮಂಗಳವಾರ ಬೆಳಗ್ಗೆ ಸಂಭ್ರಮದಿಂದ ಸ್ವಾಗತ ನೀಡಲಾಯಿತು. ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಜಯರಾಮ, ಮಡಪ್ಪಾಡಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ, ನಿರ್ದೇಶಕರಾದ ಸೋಮಶೇಖರ ಕೇವಳ, ಚಂದ್ರಶೇಖರ ಗುಡ್ಡೆ ಹಾಗೂ ಊರವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
























