ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಮೊಟ್ಟೆ ಅಭಿಯಾನ ನಡೆಸಿದೆ.
ರಾಜ್ಯದ 568 ಶಾಲೆಗಳಲ್ಲಿ ಮಕ್ಕಳಿಗೆ ವಾರಕ್ಕೆ ಮೂರು ದಿನವಷ್ಟೇ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ ಎಂಬ ಮಾಹಿತಿ ಅಜೀಂ ಪ್ರೇಂಜಿ ಫೌಂಡೇಶನ್ ವರದಿಯಿಂದ ಬಹಿರಂಗವಾಗಿದೆ. ಈ ವಿಷಯವನ್ನಿಟ್ಟುಕೊಂಡು ಆರರಲ್ಲಿ ಮೂರು ಮೊಟ್ಟೆಗಳು ಮಕ್ಕಳಿಗೆ, ಉಳಿದ ಮೂರು ಮೊಟ್ಟೆಗಳು ಯಾರ ಬಾಯಿಗೆ ಹೋಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತನ್ನ ಎಕ್ಸ್ ಖಾತೆಯ ಮೂಲಕ ಪ್ರಶ್ನೆ ಮಾಡಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದೊಂದು ಮೊಟ್ಟೆ ತಿನ್ನುತ್ತಿರುವಂತೆ ಚಿತ್ರವನ್ನು ಹಂಚಿಕೊಂಡಿರುವ ಬಿಜೆಪಿ, ದಾನಿಗಳು ಆರು ಮೊಟ್ಟೆ ಕೊಡುತ್ತಿದ್ದು ಮಕ್ಕಳಿಗೆ ಮೂರು ಮೊಟ್ಟೆ ಮಾತ್ರ ತಲುಪುತ್ತಿದೆ. ಇನ್ನುಳಿದ ಮೂರು ಮೊಟ್ಟೆಗಳು ಯಾರ ಬಾಯಿಗೆ? ಎಂದು ಲೇವಡಿ ಮಾಡಿದೆ.
ಹಾಗೆಯೇ ಕಾಂಗ್ರೆಸ್ ಪಕ್ಷ ರಾಜ್ಯವನ್ನು ದಿವಾಳಿ ಮಾಡಿದೆ. ಶಾಲಾ ಮಕ್ಕಳಿಗೆ ಶೂ ಒದಗಿಸುವುದಕ್ಕೂ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಆದ್ದರಿಂದ ಶಾಲಾ ಮಕ್ಕಳಿಗೆ ಶೂ ದಾನ ಮಾಡಲು ಬೂಟ್ ಪೇ ಸ್ಕ್ಯಾನ್ ಮಾಡುವಂತೆ ವ್ಯಂಗ್ಯ ಮಾಡಿದೆ.
























