ಮಂಗಳೂರು : ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ನ ಕೃಷ್ಣಾಪುರ ಹಿಲ್ಸೈಡ್ ಬಳಿ ಸಂಭವಿಸಿದೆ.
ಮೃತರನ್ನು ಹಿಲ್ಸೈಡ್ ನಿವಾಸಿ ಅಸ್ಗರ್ ಅಲಿ ಅವರ ಪುತ್ರ ಅಫ್ತಾಬ್ (18) ಎಂದು ಗುರುತಿಸಲಾಗಿದೆ. ಅವರು ಸುರತ್ಕಲ್ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು.
ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಫ್ತಾಬ್ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಅಸ್ಗರ್ ಅಲಿ ಅವರ ನಾಲ್ಕು ಮಕ್ಕಳಲ್ಲಿ ಅಫ್ತಾಬ್ ಏಕೈಕ ಪುತ್ರ. ಅವರ ಮೂವರು ಸಹೋದರಿಯರಿಗೆ ವಿವಾಹವಾಗಿದೆ. ಅವರ ತಾಯಿ ಕೋವಿಡ್ ಸಮಯದಲ್ಲಿ ನಿಧನರಾಗಿದ್ದರು. ಅಂದಿನಿಂದ ತಂದೆ ಮತ್ತು ಮಗ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು. ಆಟೋರಿಕ್ಷಾ ಚಾಲಕರಾದ ಅಲಿ, ಮಧ್ಯಾಹ್ನದವರೆಗೂ ಮಗನೊಂದಿಗೆ ಮನೆಯಲ್ಲಿದ್ದರು. ಅವರು ಕೆಲಸಕ್ಕೆ ಹೋದ ನಂತರ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

