ಸೋಮವಾರ, ಶನಿವಾರ ಮೊಟ್ಟೆ ಕೊಡದ ಕುರಿತು ದೂರು
ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನಿವಾರಿಸುವ ಉದ್ದೇಶದಿಂದ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ವಾರದ 6 ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಸರ್ಕಾರ ಘೋಷಣೆ ಮಾಡಿದೆ.
ಕೆಲವು ಶಾಲೆಗಳಲ್ಲಿ ಎಸ್ಡಿಎಂಸಿ ಸೂಚನೆ ಮೇರೆಗೆ 3 ದಿನ ಮೊಟ್ಟೆ, 3 ದಿನ ಬಾಳೆಹಣ್ಣು ಕೊಡುತ್ತಿದ್ದಾರೆ. ಸೋಮವಾರ ಮತ್ತು ಶನಿವಾರ ಮೊಟ್ಟೆ ಕೊಡದೆ ಬಾಳೆಹಣ್ಣು ಕೊಡುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ.
762 ಶಾಲೆಗಳಲ್ಲಿ ಪರಿಶೀಲನೆ ಮಾಡಿದಾಗ ಸುಮಾರು 568 ಶಾಲೆಗಳಲ್ಲಿ ಮೊಟ್ಟೆ ಕಡ್ಡಾಯವಾಗಿ ಕೊಡುತ್ತಿಲ್ಲದ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಈ 568 ಶಾಲೆಗಳಿಗೆ ಭೇಟಿ ನೀಡಿ ಎಸ್ಡಿಎಂಸಿಐವರಿಗೆ ತಿಳಿವಳಿಕೆ ಹೇಳಬೇಕು ಎಂದು ಡಿಡಿಪಿಐಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪಿಎಂ ಪೋಷಣ್ ಶಕ್ತಿ ನಿರ್ಮಾಣದ ನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ.
























