ತೆರಿಗೆ ರೂಪದಲ್ಲಿ ಗಂಡನಿಂದ ಕಿತ್ತು ಅದರಲ್ಲರ್ಧ ಹೆಂಡತಿಗೆ ನೀಡುತ್ತಿದೆ ರಾಜ್ಯ ಸರ್ಕಾರ
ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆಯನ್ನು ಜನರಿಗೆ ಅನುಕೂಲ ಎಂಬ ನೆಪವೊಡ್ಡಿ ಬೆಲೆ ಏರಿಸಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಡಘಟ್ಟ ಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಡ ಜನರಿಗೆ ಅನುಕೂಲ ಒದಗಿಸುತ್ತೇವೆ ಎಂದು ಹೇಳಿಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಬಳಿಕ ಇ ಖಾತೆ ಪಡೆಯಲು ದುಬಾರಿ ಹಣ ಪಾವತಿ, ಹೊಸ ವಿದ್ಯುತ್ ಸಂಪರ್ಕ, ಪಹಣಿ, ರೈತರಿಗೆ ಬೇಕಾದ ಟ್ರಾನ್ಸ್ಫಾರ್ಮರ್ ಪಡೆಯಲು ಪಡಬಾರದ ಕಷ್ಟ ಬರುವಂತೆ ಮಾಡಿರುವುದು ನೀತಿಯೇ? ಎಂದು ಪ್ರಶ್ನೆ ಮಾಡಿದ್ದಾರೆ. 23 ಲಕ್ಷ ಜನರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮ ನ್ಯಾಯವೇ? ಎಂದು ಕೇಳಿದ್ದಾರೆ.
ಪ್ರತಿದಿನ ಬಳಕೆ ಮಾಡುವ ಅಡುಗೆ ಎಣ್ಣೆ ದರ ಹೆಚ್ಚುತ್ತಿದೆ. ಬಾಂಡ್ ಪೇಪರ್ ಬೆಲೆ 100 ರೂ. ಆಗಿದೆ. ಚಿನ್ನವನ್ನು ಅಡವಿಟ್ಟವರೇ ಸರ್ಕಾರಕ್ಕೆ ಸುಂಕ ಪಾವತಿಸಬೇಕಿದೆ. ಬಿತ್ತನೆ ಬೀಜಗಳ ದರವನ್ನು ಶೇ 60ರಷ್ಟು ಹೆಚ್ಚಿಸಲಾಗಿದೆ. ಮದ್ಯದ ದರವನ್ನು ವರ್ಷಕ್ಕೆ ಮೂರು ಬಾರಿ ಏರಿಸಿ ಆ ಹಣದಲ್ಲಿ ಮಂತ್ರಿಗಳಿಗೆ, ಶಾಸಕರಿಗೆ ಕಾರು ಖರೀದಿಸಲಾಗುತ್ತಿದೆ. ಸಾಗುವಳಿ ಚೀಟಿಗಾಗಿ ಅಲೆದು ರೈತರು ಕೊರಗುತ್ತಿದ್ದಾರೆ. ಗಂಡನಿoದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಅರ್ಧವನ್ನು ಇಟ್ಟುಕೊಂಡು ಉಳಿದರ್ಧವನ್ನು ಹೆಂಡತಿಗೆ ಕೊಡುವುದು ಯಾವ ನ್ಯಾಯ? ಕಾಂಗ್ರೆಸಿನದ್ದು ಜನವಿರೋಧಿ ಸರ್ಕಾರವಾಗಿದೆ. ಇನ್ನು ಒಂದು ತಿಂಗಳಲ್ಲಿ ಇದನ್ನು ಸರಿ ಪಡಿಸದಿದ್ದರೆ ತಾಲ್ಲೂಕು ಪಂಚಾಯಿತಿ, ಜಿಲ್ಲಾಪoಚಾಯಿತಿ, ಕೊನೆಗೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
























