ಸಿದ್ದರಾಮಯ್ಯನವರಿಗೆ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಹುದ್ದೆ

ಮುಖ್ಯಮಂತ್ರಿ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ ಧುಮುಕುವ ಊಹಾಪೋಹ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಿದೆ. ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೇಳಿಕೆ–ಪ್ರತಿ ಹೇಳಿಕೆಗಳ ಜಟಾಪಟಿ ಜೋರಾಗಿ ನಡೆಯುತ್ತಿರುವ ಹೊತ್ತಿಗೆ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. 5 ವರ್ಷ ನಾನೇ ಸಿಎಂ ಎಂಬ ಸಂದೇಶ ನೀಡಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ತೊರೆಯುವ ಗಳಿಗೆ ಸನ್ನಿಹಿತವಾಗುತ್ತಿದೆಯೇ ಎಂಬ ಕುತೂಹಲ ಮೂಡಿದೆ.

ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ನಿರ್ಧರಿಸಿದ್ದು, ಜುಲೈ 15ರಂದು ಬೆಂಗಳೂರಿನಲ್ಲಿ ಮೊದಲ ಸಭೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದ ಭಾರತ್ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಈ ಪೈಕಿ ಐವರು ಮಾಜಿ ಸಿಎಂಗಳು, 10 ಮಂದಿ ಕೇಂದ್ರದ ಮಾಜಿ ಸಚಿವರೂ ಸಹ ಪಾಲ್ಗೊಳ್ಳುವ ಸಾಧ್ಯತೆಯಿದೆ. ದೇಶದಲ್ಲಿ ಹಿಂದುಳಿದ ವರ್ಗದ ಸಮುದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಒದಗಿಸುವ ದಿಕ್ಕಿನಲ್ಲಿ ಕಾರ್ಯತಂತ್ರ ರೂಪಿಸಲು ಈ ವೇದಿಕೆ ಸಿದ್ಧಪಡಿಸಲಾಗಿದೆ.





















































 
 

ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 24 ಸದಸ್ಯರಿರುವ ಈ ಸಲಹಾ ಮಂಡಳಿಯನ್ನು ಸಿದ್ದರಾಮಯ್ಯ ಮುನ್ನಡೆಸಲಿದ್ದಾರೆ. ಸಲಹಾ ಮಂಡಳಿ ರಚನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರ ಪೈಕಿ ಸಿದ್ದರಾಮಯ್ಯ ಅವರೊಂದಿಗೆ ಬಿ.ಕೆ.ಹರಿಪ್ರಸಾದ್ ಹಾಗೂ ಮಾಜಿ ಸಿಎಂ ಎಂ.ವೀರಪ್ಪ ಮೊಯಿಲಿ ಕೂಡ ಮಂಡಳಿಯಲ್ಲಿದ್ದಾರೆ. ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಈ ತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.

ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಮುಂದಿನ ಕಾರ್ಯ ಯೋಜನೆಗಳು, ಅವುಗಳ ಅನುಷ್ಠಾನ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಈ ಸಲಹಾ ಮಂಡಳಿ ಹಲವು ಸಲಹೆಗಳನ್ನು ನೀಡಲಿದೆ. ದೇಶಾದ್ಯಂತ ಹಿಂದುಳಿದ ವರ್ಗಗಳ ಸಮಸ್ಯೆ, ಸವಾಲುಗಳನ್ನು ಅರಿತು ಸಲಹೆ ನೀಡುವುದರ ಜೊತೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಮಂಡಳಿ ಸಲಹೆಗಳನ್ನು ನೀಡಲಿದೆ.

ಸಿದ್ದರಾಮಯ್ಯ (ಅಧ್ಯಕ್ಷರು), ಬಿ.ಕೆ. ಹರಿಪ್ರಸಾದ್, ಅಶೋಕ್ ಗೆಹ್ಲೋಟ್‌, ಭೂಪೇಶ್ ಬಘೇಲ್, ವಿ.ನಾರಾಯಣಸ್ವಾಮಿ, ಸಚಿನ್ ಪೈಲಟ್, ಗುರುದೀಪ್ ಸಿಂಗ್ ಸಪ್ಪಲ್, ಅರುಣ್ ಯಾದವ್, ವಿಜಯ್ ನಾಮ್‌ದೇವ್‌ರಾವ್ ವಾದೆತ್ತಿವಾರ್, ವಿ.ಹನುಮಂತರಾವ್, ಅಮಿತ್ ಚಾವ್ಡಾ, ಬಿ.ಮಹೇಶ್ ಕುಮಾರ್ ಗೌಡ, ಪೊನ್ನಮ್ ಪ್ರಭಾಕರ, ಡಾ. ವೀರಪ್ಪ ಮೊಯಿಲಿ, ಎಸ್.ಜ್ಯೋತಿಮಣಿ (ಸಂಸದೆ), ಶ್ರೀಕಾಂತ್ ಜೇನಾ, ಕಮಲೇಶ್ವರ್ ಪಟೇಲ್, ಅಜಯ್ ಕುಮಾರ್ ಲಲ್ಲು, ಸುಭಾಷಿಣಿ ಯಾದವ್, ಅಡೂರು ಪ್ರಕಾಶ್ (ಸಂಸದ), ಧನೇಂದ್ರ ಸಾಹು, ಹೀನಾ ಕಾವ್ರೆ, ಡಾ.ಅನಿಲ್ ಜೈಹಿಂದ್ ಈ ಮಂಡಳಿಯಲ್ಲಿದ್ದಾರೆ.

error: Content is protected !!
Scroll to Top