ಮಳೆ ದಾಖಲೆಯಲ್ಲಿ ಚಿರಾಪುಂಜಿಯನ್ನು ಹಿಂದಿಕ್ಕಿದ ಉಡುಪಿ

ಒಂದು ತಿಂಗಳಲ್ಲಿ 1,140 ಮಿ.ಮೀ ಮಳೆ ಸುರಿದು ಹೊಸ ದಾಖಲೆ

ಉಡುಪಿ: ಮೇಘಾಲಯದ ಚಿರಾಪುಂಜಿ ದೇಶದಲ್ಲಿ ಅತ್ಯಧಿಕ ಮಳೆಯಾಗುವ ಪ್ರದೇಶ ಎಂಬ ದಾಖಲೆ ಅನೇಕ ವರ್ಷಗಳಿಂದ ಇದೆ. ಆದರೆ ಈ ಸಲ ಉಡುಪಿ ಜಿಲ್ಲೆ ಮಳೆ ದಾಖಲೆಯಲ್ಲಿ ಚಿರಾಪುಂಜಿಯನ್ನು ಹಿಂದಿಕ್ಕಿದೆ. ಜೂನ್‌ ತಿಂಗಳಲ್ಲಿ ಉಡುಪಿಯಾದ್ಯಂತ ದಾಖಲೆಯ ಮಳೆ ಸುರಿದಿದ್ದು, ಕರ್ನಾಟಕದಲ್ಲಿ ಅತ್ಯಧಿಕ ಮಳೆಯಾಗುವ ಆಗುಂಬೆಯನ್ನೂ ಹಿಂದಿಕ್ಕಿದೆ.

ಜೂನ್ ತಿಂಗಳ ಮಳೆ ಲೆಕ್ಕಾಚಾರದಲ್ಲಿ ಉಡುಪಿ ಜಿಲ್ಲೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಒಂದು ತಿಂಗಳಲ್ಲಿ 1,140 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ 4,300 ಮಿ.ಮೀ ಮಳೆಯಾಗುವ ವಾಡಿಕೆಯಿದ್ದು, ಈ ಬಾರಿ ದಾಖಲೆಯ ಮಳೆಯಾಗುವ ಮುನ್ಸೂಚನೆ ಇದೆ. ಉಡುಪಿಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ ಎರಡು ದಶಕಗಳಲ್ಲಿ ಈ ವರ್ಷ ಸುರಿದ ಮಳೆ ಅತಿಹೆಚ್ಚು ಎಂಬುದು ಕೂಡ ಒಂದು ದಾಖಲಾಗಿದೆ.





















































 
 

ಹವಾಮಾನ ಇಲಾಖೆ ಬಿಡುಗಡೆಗೊಳಿಸಿದ ದಾಖಲೆ ಪ್ರಕಾರ ಜೂನ್ ತಿಂಗಳ 27ರಂದು ಉಡಪಿ ಜಿಲ್ಲೆಯಲ್ಲಿ ಹೊಸ ಮಳೆ ದಾಖಲೆ ಸೃಷ್ಟಿಯಾಗಿದೆ. ಇದಾಗಿ ಮೂರು ದಿನ ಉಡುಪಿ ಜಿಲ್ಲೆಯಲ್ಲಿ 150 ಮಿ.ಮೀ.ಗೂ ಹೆಚ್ಚು ಮಳೆಯಾಗಿರುವುದು ಬಹುದೊಡ್ಡ ದಾಖಲೆಯಾಗಿದೆ. ಮೂರು ತಾಲೂಕುಗಳಲ್ಲಿ ಪಶ್ಚಿಮ ಘಟ್ಟದ ತಪ್ಪಲು, ಐದು ತಾಲೂಕುಗಳಲ್ಲಿ ಸಮುದ್ರವನ್ನು ಆವರಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ 4,300 ಮೀ.ಮೀ ಸರಾಸರಿ ಮಳೆಯಾಗುತ್ತದೆ. ಈ ವರ್ಷ ಮೇ 15ರ ನಂತರ ಪೂರ್ವ ಮುಂಗಾರು ಮಳೆ ಅಬ್ಬರದಿಂದ ಸುರಿದಿದೆ. ಚಂಡಮಾರುತದಿಂದ ಭಾರಿ ಮಳೆಯಾಗಿತ್ತು. ಇದಾದ ಬೆನ್ನಲ್ಲೇ ಮುಂಗಾರು ಮಳೆ ಆರಂಭವಾಗಿತ್ತು.

ಜೂನ್ ತಿಂಗಳಿನಲ್ಲಿ ಉಡುಪಿಯಲ್ಲಿ ಅತಿಹೆಚ್ಚು ಮಳೆಯಾದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ದ.ಕದಲ್ಲಿ ಒಂದು ತಿಂಗಳಲ್ಲಿ 980 ಮಿ.ಮೀ ದಾಖಲೆಯ ಮಳೆ ಸುರಿದಿದೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ 902 ಮಿ.ಮೀ ಮಳೆಯಾಗಿದ್ದು, ಇದು ಮೂರನೇ ಸ್ಥಾನದಲ್ಲಿದೆ. ಮೇಘಾಲಯದ ಸೌತ್ ವೆಸ್ಟ್ ಕಾಶಿ ಹಿಲ್‌ನಲ್ಲಿ 880 ಮಿ.ಮೀ ಮಳೆಯಾಗಿದೆ.

ಕಳೆದ ಒಂದೂವರೆ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ದಿನ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಸುಮಾರು 15 ದಿನ ಆರೆಂಜ್ ಅಲರ್ಟ್ ಮತ್ತು ಯೆಲ್ಲೋ ಅಲರ್ಟ್ ಕೂಡ ಘೋಷಣೆ ಆಗಿತ್ತು.

error: Content is protected !!
Scroll to Top