ನವವಿವಾಹಿತೆಯ ಶವ ರೈಲ್ವೆ ಟ್ರಾಕ್‌ನಲ್ಲಿ ಪತ್ತೆ | ಪತಿಯ ವಿರುದ್ಧ ವರದಕ್ಷಿಣೆಗಾಗಿ ಕಿರುಕುಳ, ಕೊಲೆ ಆರೋಪ ಮಾಡಿದ ಮೃತಳ ಕುಟುಂಬ ವರ್ಗ | ಪತಿ ಮನೆ ಮುಂದೆ ಶವವಿಟ್ಟು ಪ್ರತಿಭಟನೆ

ದಾವಣಗೆರೆ: ಏಳು ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆಯ ಶವ ರೈಲ್ವೆ ಟ್ರಾಕ್ ಮೇಲೆ ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕುಳವೇ ಈ ಘಟನೆಗೆ ಕಾರಣ ಎಂದು ಆರೋಪಗಳು ಕೇಳಿ ಬಂದಿವೆ.

ಚನ್ನಗಿರಿ ತಾಲೂಕಿನ ವಿದ್ಯಾ ಎಂಬವರೇ ಮೃತ ದುರ್ದೈವಿ. ವಿದ್ಯಾ ಅವರನ್ನು ಸೋಮಲಾಪುರದ ಶಿವು ಎಂಬ ಯುವಕನಿಗೆ‌ಮದುವೆ ಮಾಡಿ ಕೊಡಲಾಗಿತ್ತು. ಶಿವು ಪೊಲೀಸ್ ಆಗಿದ್ದು, ದಂಪತಿ ಬೆಂಗಳೂರಿನ ಶಂಕರಪುರಂನಲ್ಲಿ ವಾಸ ಮಾಡುತ್ತಿದ್ದರು.

ಜೂ. 30 ರಂದು ನಾಪತ್ತೆಯಾಗಿದ್ದ ‌ವಿದ್ಯಾ, ಸಂಜೆ ಅರಸೀಕೆರೆ ರೈಲ್ವೆ ಟ್ರಾಕ್‌ನಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಶಂಕರಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





















































 
 

ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ವಿದ್ಯಾ ಕುಟುಂಬಸ್ಥರು ಅರಸೀಕೆರೆ ಠಾಣೆಯಲ್ಲಿ ಪತಿಯ ವಿರುದ್ಧ ಕೇಸ್ ನೀಡಿದ್ದು, ಆರೋಪಿ ಸ್ಥಾನದಲ್ಲಿರುವ ಶಿವುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿದ್ಯಾಗೆ ಕಳೆದ ಸುಮಾರು ನಾಲ್ಕು ತಿಂಗಳುಗಳಿಂದ ಪತಿಯ ಕಡೆಯಿಂದ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು. ದೈಹಿಕ ಕಿರುಕುಳವನ್ನೂ ನೀಡುತ್ತಿದ್ದರು. ಆಕೆಯನ್ನು ಅವರೇ ಕೊಂದಿದ್ದಾರೆ ಎಂದು ಆರೋಪಿಸಿ ಶಿವು ಮನೆಯ ಮುಂದೆ ವಿದ್ಯಾ ಅವರ ಶವವನ್ನಿರಿಸಿ ಆಕೆಯ ಕುಟುಂಬ ವರ್ಗ ಪ್ರತಿಭಟನೆ ನಡೆಸಿದೆ.

error: Content is protected !!
Scroll to Top