ಪುತ್ತೂರು: ಯುವಕನೋರ್ವ ಯುವತಿಯನ್ನು ಗರ್ಭಿಣಿ ಮಾಡಿ ಮದುವೆಯಾಗದೆ ನಾಪತ್ತೆಯಾಗಿದ್ದ ಘಟನೆಗೆ ಸಂಬಂಧಿಸಿದ ಹಾಗೆ ಶಾಸಕ ಅಶೋಕ್ ರೈ ಅವರು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿದ ಹಾಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಹೇಳಿಕೆಯಿಂದ ನನಗೆ ಬೇಸರವಾಗಿದೆ. ಪಕ್ಷ ಬೇಧ ಮಾಡದೆ ಸಂತ್ರಸ್ತೆಗೆ ನ್ಯಾಯ ಒದಗಿಸಲು ಅವರಿಬ್ಬರಿಗೂ ಮದುವೆ ಮಾಡುವಂತೆ ಹೇಳಿದ್ದೆ.ಆ ಹೆಣ್ಣು ಮಗಳಿಗೆ ನ್ಯಾಯ ದೊರೆಯಬೇಕು ಎನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೆ ಪುತ್ತಿಲ ಅವರು ನಾನು ಮಧ್ಯಸ್ಥಿಕೆ ವಹಿಸಿ ಇವರಿಬ್ಬರ ಮದುವೆ ಮಾಡಿಸಬೇಕಿತ್ತು ಎಂದು ಹೇಳಿದ್ದಾರೆ. ಎರಡೂ ಕುಟುಂಬದವರು ನನ್ನನ್ನು ಸಂಪರ್ಕ ಮಾಡಿದಾಗ ನಾನದನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದೆ. ಆರೋಪಿ ಯುವಕ ಕಳೆದ ಚುನಾವಣಾ ಸಂದರ್ಭದಲ್ಲಿ ಪುತ್ತಿಲ ಪರ ಪ್ರಚಾರ ಮಾಡಿದ್ದನು. ಇದನ್ನು ರಾಜಕೀಯ ದೃಷ್ಟಿಯಿಂದ ನೋಡಿದ್ದರೆ ಬೇರೆಯೇ ಆಯಾಮ ಪಡೆಯುತ್ತಿತ್ತು. ಆದರೆ ನಾನು ಆ ರೀತಿ ಯೋಚಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇದು ರಾಜಕೀಯ ಮಾಡುವ, ಬೀದಿಯಲ್ಲಿ ಮಾತನಾಡುವ ವಿಷಯವಲ್ಲ. ಸಂತ್ರಸ್ತೆಗೆ ನ್ಯಾಯ ಕೊಡಿಸುವುದು ಎಲ್ಲರ ಜವಾಬ್ದಾರಿ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
























