5.759 ಕೆಜಿ ಗಾಂಜಾದ ಜೊತೆ ಆರು ಆರೋಪಿಗಳ ಸೆರೆ

ಡ್ರಗ್ಸ್‌ ವ್ಯಸನಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು

ಮಂಗಳೂರು: ನಗರ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್ ಠಾಣೆಯ ಪೊಲೀಸರು ದಾಳಿ ಮಾಡಿ ಐವರು ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಇವರ ಬಂಧನಕ್ಕೆ ನೆರವಾದದ್ದು ಡ್ರಗ್ಸ್‌ ವ್ಯಸನಿಯಾಗಿದ್ದ ಯುವಕನೊಬ್ಬನ ತಂದೆ ನೀಡಿದ್ದ ದೂರು ಎನ್ನುವುದು ಗಮನಾರ್ಹ ಅಂಶ.

ನಗರದ ಬಿಕರ್ನಕಟ್ಟೆಯ ಅಡುಮರೋಳಿ ನಿವಾಸಿ ತುಷಾರ್ ಸೋನು (21), ನಾಗುರಿಯ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆಯ ಸಾಗರ್ ಕರ್ಕೇರ (19), ಶಕ್ತಿನಗರದ ವಿಕಾಸ್ ಥಾಪ ಪುಚ್ಚಿ (23), ಅಳಕೆ ಕಂಡೆಟ್ಟು ಎಂಬಲ್ಲಿನ ವಿಘ್ನೇಶ್ ಕಾಮತ್ (24) ಬಂಧಿತ ಆರೋಪಿಗಳು. ಆರೋಪಿಗಳಿಂದ 5,20,000 ರೂ. ಮೌಲ್ಯದ 5.759 ಕೆ.ಜಿ. ನಿಷೇಧಿತ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 6 ಮೊಬೈಲ್ ಫೋನ್, 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಗರದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾರೆ. ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಪ್ರತಿ ಗಾಂಜಾ ಪ್ಯಾಕೇಟ್‌ಗೆ 1,000 ರೂ.ನಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.





















































 
 

ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ತನ್ನ ಮಗ ಮಾದಕ ವ್ಯಸನಿಯಾಗಿರುವ ಬಗ್ಗೆ ಪೊಲೀಸ್‌ ಕಮಿಷನರ್‌ ಸುಧಿರ್‌ ಕುಮಾರ್‌ ರೆಡ್ಡಿಯವರ ಬಳಿ ನೊಂದು ಹೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಪರಿಶೀಲನೆಗೆ ಸೆನ್ ತಂಡವನ್ನು ರಚಿಸಿ ತನಿಖೆ ನಡೆಸಲಾಯಿತು. ಆ ತಂಡ ನಾನಾ ಆಯಾಮಗಳಲ್ಲಿ ತನಿಖೆ ನಡೆಸಿ 5 ಮಂದಿಯನ್ನು ಬಂಧಿಸಿದೆ. ಒಬ್ಬ ಪೋಷಕರು ದೂರು ನೀಡಿದ ಕಾರಣ ಕನಿಷ್ಟ 200 ಮಂದಿಗೆ ಡ್ರಗ್ಸ್ ಸರಬರಾಜು ನಿಂತಿದೆ. ಈ ರೀತಿ ಸಾರ್ವಜನಿಕರು ಡ್ರಗ್ಸ್ ಬಗ್ಗೆ ಸಮರ್ಪಕ ಮಾಹಿತಿ ನೀಡಿದರೆ ಈ ಜಿಲ್ಲೆಯನ್ನು ಡ್ರಗ್ಸ್ ಮುಕ್ತಗೊಳಿಸಲು ಸಾಧ್ಯವಿದೆ. ಡ್ರಗ್ಸ್ ಮುಕ್ತಗೊಳಿಸಲು ಪೊಲೀಸರ ಜತೆ ಎಲ್ಲರೂ ಸಹಕರಿಸಬೇಕು ಎಂದು ಸುಧೀರ್ ಕುಮಾರ್ ರೆಡ್ಡಿ ಮನವಿ ಮಾಡಿದ್ದಾರೆ.

ಆರೋಪಿಗಳಿಗೆ ಎಲ್ಲಿಂದ ಗಾಂಜಾ ಪೂರೈಕೆಯಾಗುತ್ತಿದೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ. ಆರೋಪಿಗಳ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. ನಗರ ಮತ್ತು ಸುತ್ತಮುತ್ತಲಿನ ಸುಮಾರು 200 ಮಂದಿ ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರಿಗೆ 5 ಮಂದಿ ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇವರನ್ನು ಬಂಧಿಸದೆ ಇದ್ದಲ್ಲಿ ಮತ್ತಷ್ಟು ಮಂದಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

error: Content is protected !!
Scroll to Top