ತಲೆ ಸ್ವಲ್ಪ ವ್ಯತ್ಯಾಸವಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದಿದ್ದು ಯಾರಿಗೆ?
ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ RSS ನ ದೇಶಭಕ್ತಿಗೆ ಸರ್ಟಿಫಿಕೇಟ್ ನೀಡುವ ಯೋಗ್ಯತೆ ಇಲ್ಲ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ RSS ಬ್ಯಾನ್ ಮಾಡುವುದಾಗಿ ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದ್ದು, ಶಬ್ಧ ಪ್ರಯೋಗಿಸಬೇಕೋ, ಬೇಡವೋ.. ಆದರೆ ಕೆಲವರಿಗೆ ತಲೆ ಸ್ವಲ್ಪ ವ್ಯತ್ಯಾಸವಾಗಿ ಏನೇನೋ ಮಾತನಾಡುತ್ತಾರೆ. ತಲೆ ಸರಿ ಇದ್ದಿದ್ದರೆ ಇಂತಹ ಹೇಳಿಕೆ ನೀಡುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಡಿಎನ್‌ಎಯಲ್ಲೇ ಸುಳ್ಳು ಹರಿದು ಬಂದಿದೆ. ಗಾಂಧಿ ಹತ್ಯೆಯ ಸಂದರ್ಭದಲ್ಲಿ ಮೊದಲ ಬಾರಿಗೆ RSS ಅನ್ನು ನಿಷೇಧಿಸಲಾಯಿತು. ಆದರೆ ಮೂರು ಬಾರಿ ನಡೆದ ತನಿಖೆಯಲ್ಲಿಯೂ ಗಾಂಧಿ ಹತ್ಯೆಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಸಾಬೀತಾಗಿ, ನೆಹರೂ ಸರ್ಕಾರವೇ ಈ ನಿಷೇಧವನ್ನು ತೆರವು ಮಾಡಿತ್ತು. ಎರಡನೇ ಬಾರಿ ತುರ್ತು ಪರಿಸ್ಥಿತಿ ಸಮಯದಲ್ಲಿ ಇಂದಿರಾ ಗಾಂಧಿ ಸಂಘವನ್ನು ಬ್ಯಾನ್ ಮಾಡಿದರು. ಆದರೆ ತುರ್ತು ಪರಿಸ್ಥಿತಿ ಜೊತೆಗೆ ಅವರ ಅಧಿಕಾರವೇ ಮುಗಿಯಿತು ಎಂದು ಟೀಕಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸವಾದ ಸಮಯದಲ್ಲಿಯೂ RSS ಅನ್ನು ಬ್ಯಾನ್ ಮಾಡಲಾಯಿತು. ಇಲ್ಲೇ ಹುಟ್ಟಿದ ಶ್ರೀರಾಮನಿಗಿಂತ, ಇಲ್ಲಿ ಹುಟ್ಚದ ಬಾಬರ್ ಮೇಲೆಯೇ ಒಲವು ಜಾಸ್ತಿ ಇರುವ ಕಾಂಗ್ರೆಸ್ ಆ ಸಮಯದಲ್ಲೂ ಈ ಘಟನೆಯಲ್ಲಿ ಸಂಘದ ಪಾತ್ರವನ್ನು ಸಾಬೀತು ಮಾಡುವಲ್ಲಿ ವಿಫಲವಾಯಿತು ಎಂದು ಹೇಳಿದ್ದಾರೆ.
1963 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪೊಲೀಸ್, ಮಿಲಿಟರಿಯ ಹೊರತಾಗಿ ಭಾಗವಹಿಸಿದ ಹಿರಿಮೆ ಸಂಘದ್ದು. ಆಗಲೂ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಪಕ್ಷ, ನೆಹರೂ ಪ್ರಧಾನಿ ಎಂದವರು ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ. ಹಾಗೆಯೇ ಅಂಬೇಡ್ಕರ್ ಅವರ ಹೆಸರು ಹೇಳುವ ಯೋಗ್ಯತೆಯೂ ಕಾಂಗ್ರೆಸ್‌ಗೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
























