ಮುಂಚೂಣಿಯಲ್ಲಿದೆ ನಿರ್ಮಲ ಸೀತಾರಾಮನ್, ಡಿ.ಪುರಂದೇಶ್ವರಿ, ವನತಿ ಶ್ರೀನಿವಾಸನ್ ಹೆಸರು
ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆಗಳು ಶುರುವಾಗಿದ್ದು, ಈ ಸಲ ಕೇಸರಿ ಪಕ್ಷಕ್ಕೆ ಮಹಿಳಾ ಸಾರಥ್ಯ ಸಿಗಲಿದೆ ಎಂಬ ಸುಳಿವು ಸಿಕ್ಕಿದೆ. ಹಾಲಿ ಅಧ್ಯಕ್ಷ ಜೆ.ಪಿ.ನಡ್ಡ ಅಧಿಕಾರವಧಿ 2023ಕ್ಕೆ ಮುಗಿದಿದ್ದರೂ 2024ರ ಸಾರ್ವತ್ರಿಕ ಚುನಾವಣೆವರೆಗೆ ಅವರನ್ನು ಮುಂದುವರಿಸಲಾಗಿತ್ತು. ಈಗ ಚುನಾವಣೆ ಮುಗಿದು ಒಂದು ವರ್ಷ ಕಳೆದಿದ್ದು, ಸದ್ಯದಲ್ಲೇ ಬಿಜೆಪಿಗೆ ನೂತನ ಅಧ್ಯಕ್ಷರು ಬರಲಿದ್ದಾರೆ.
ಉನ್ನತ ನಾಯಕರು ಅಧ್ಯಕ್ಷರ ಆಯ್ಕೆ ಕುರಿತು ಮಾತುಕತೆಗಳನ್ನು ನಡೆಸುತ್ತಿದ್ದು, ರಾಷ್ಟ್ರೀಯ ನೆಲೆಯಲ್ಲಿ ಗುರುತಿಸಿಕೊಂಡಿರುವ ಹಲವು ನಾಯಕಿಯರ ಹೆಸರುಗಳು ಚರ್ಚೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಚಿವೆ ಡಿ.ಪುರಂದೇಶ್ವರಿ, ಹಿರಿಯ ನಾಯಕಿ ವನತಿ ಶ್ರೀನಿವಾಸನ್ ಹೆಸರುಗಳು ಮುಂಚೂಣಿಯಲ್ಲಿವೆ. ಈ ಪೈಕಿ ಯಾರೇ ಆಯ್ಕೆಯಾದರೂ ಬಿಜೆಪಿ ಸಾರಥ್ಯ ದಕ್ಷಿಣ ಭಾರತದವರ ಕೈಗೆ ಸಿಕ್ಕಂತಾಗುತ್ತದೆ.
ಈ ಪೈಕಿ ನಿರ್ಮಲಾ ಸೀತಾರಾಮನ್ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ನಿರ್ಮಲಾ ಪರವಾಗಿ ಬಲವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೆ.ಪಿ.ನಡ್ಡ ಕೂಡ ನಿರ್ಮಲಾ ಸೀತಾರಾಮನ್ ಪರವಾಗಿದ್ದಾರೆ ಎನ್ನಲಾಗಿದೆ. ಹಣಕಾಸು ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ನಿರ್ಮಲಾ ಸೀತಾರಾಮನ್ ಅಪ್ರತಿಮ ವಾಗ್ಮಿ. ಸಂಸತ್ತಿನಲ್ಲಿ ತನ್ನ ಮಾತಿನ ವೈಖರಿಯಿಂದಲೇ ಎದುರಾಳಿಗಳ ಬಾಯಿ ಮುಚ್ಚಿಸುತ್ತಾರೆ. ದಾಖಲೆ ಸಮೇತ ನೇರಾನೇರ ದಾಳಿ ನಡೆಸುವುದು ಅವರ ಛಾತಿ.
ಆಂಧ್ರ ಪ್ರದೇಶದ ಬಿಜೆಪಿ ಅಧ್ಯಕ್ಷೆಯಾಗಿದ್ದ ಡಿ.ಪುರಂದೇಶ್ವರಿ ಕೂಡ ಸಮರ್ಥ ನಾಯಕಿ. ಹಲವು ಭಾಷೆಗಳನ್ನು ಬಲ್ಲ ಡಿ.ಪುರಂದೇಶ್ವರಿ ನಿಷ್ಕಳಂಕ ಮತ್ತು ದಿಟ್ಟ ನಾಯಕತ್ವದ ಸುದೀರ್ಘ ಪರಂಪರೆಯನ್ನು ಅವರು ಹೊಂದಿದ್ದಾರೆ. ಇತ್ತೀಚೆಗೆ ಆಪರೇಷನ್ ಸಿಂದೂರ ನಿಯೋಗದಲ್ಲೂ ಅವರು ಇದ್ದರು.
ವನತಿ ಶ್ರೀನಿವಾಸನ್ ತಮಿಳುನಾಡಿನವರು. ವಕೀಲೆಯಾಗಿರುವ ಅವರು ರಾಜಕೀಯದಲ್ಲಿ ತನ್ನದೇ ಆದ ಛಾಪು ಹೊಂದಿದ್ದಾರೆ. ಕೊಯಂಬತ್ತೂರು ದಕ್ಷಿಣ ಕ್ಷೇತ್ರದ ಶಾಸಕಿಯೂ ಆಗಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ, ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಆರ್ಎಸ್ಎಸ್ ಚಿಂತನೆ
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಈ ಸಲ ಮಹಿಳಾ ಅಧ್ಯಕ್ಷರನ್ನು ನೇಮಿಸಬೇಕು ಎನ್ನುವುದು ಆರ್ಎಸ್ಎಸ್ ಚಿಂತನೆ. ಇದರಿಂದ ಪಕ್ಷಕ್ಕೆ ಹಲವು ಲಾಭಗಳಾಗಬಹುದು ಎಂದು ಲೆಕ್ಕ ಹಾಕಲಾಗಿದೆ. ದೇಶದಲ್ಲಿ ಈಗ ಮಹಿಳಾ ಮತದಾರರು ಬಹಳ ನಿರ್ಣಾಯಕರಾಗಿರುವುದರಿಂದ ಬಿಜೆಪಿ ಈ ತಂತ್ರಗಾರಿಕೆಗೆ ಮೊರೆ ಸಾಧ್ಯತೆ ಹೆಚ್ಚು ಇದೆ ಎನ್ನಲಾಗುತ್ತಿದೆ.
























