ಮರಳು ಬ್ಲಾಕ್‍ ಗಳ ಕಡತಗಳಲ್ಲಿ ವ್ಯತ್ಯಾಸ | ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‍ | ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆ

ಪುತ್ತೂರು: ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳಲ್ಲಿ ಗುರುತಿಸಿದ ಮರಳು ಬ್ಲಾಕ್‌ ಗಳ ಕಡತಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಈ ಕುರಿತು ಪುತ್ತೂರು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡದ್ದು ಮಂಗಳವಾರ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆಯಲ್ಲಿ.

ಕಡತಗಳಲ್ಲಿ ಸಮಸ್ಯೆಗಳಿರುವುದನ್ನು ಯಾರೂ ಗಮನಿಸುವುದಿಲ್ಲವಾ? ಸಮಿತಿಯವರೆಗೆ ಯಾಕೆ ಸಮಸ್ಯೆಯ ಕಡತಗಳನ್ನು ತರುವುದು ಯಾಕೆ? ತಪ್ಪುಗಳನ್ನು ನನ್ನ ಹಂತದವರೆಗೆ ತರುವುದಾದರೆ ತಳ ಹಂತದಲ್ಲಿ ಏನು ಮಾಡುತ್ತಿದ್ದೀರಿ? ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ, ಕಡತಗಳನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ. ನೀವು ಗ್ರೌಂಡ್ ವರ್ಕ್ ಮಾಡುತ್ತಿಲ್ಲ. ಮರಳು ಸಿಗುವ ಲೆಕ್ಕಾಚಾರವನ್ನು ಯಾವ ಮಾನ ದಂಡದಲ್ಲಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಬೇಕು. ಸರಿಯಾಗಿ ಮಾಹಿತಿಯಿಲ್ಲದೆ ಕಡತಗಳಿಗೆ ಸಹಿ ಹೇಗೆ ಮಾಡುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುಳ್ಯ ತಹಸೀಲ್ದಾರ್‌ಗೆ ನೋಟೀಸ್ ಜಾರಿಗೊಳಿಸಲು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗಿಸ್ ಸಭೆಯ ಅಧ್ಯಕ್ಷತೆ ವಹಿಸಿ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬಗಳಲ್ಲಿ ಗುರುತಿಸಲಾಗಿರುವ ಮರಳು ಬ್ಲಾಕ್‌ಗಳ ಮಾಹಿತಿ ಪಡೆದ ಎಸಿಯವರು ಸಮರ್ಪಕವಾಗಿರುವ ಬ್ಲಾಕ್‌ ಗಳ ಕುರಿತ ಕಡತವನ್ನು ಡಿ.ಸಿ.ಯವರಿಗೆ ವರದಿ ಮಾಡುವುದು ಹಾಗೂ ಸರ್ವೇ ನಂಬರ್ ಸೇರಿದಂತೆ ವ್ಯತ್ಯಾಸಗಳಿರುವ ಬ್ಲಾಕ್‌ ಗಳ ಕಡತವನ್ನು ವಾರದೊಳಗೆ ಸರಿಪಡಿಸಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪುತ್ತೂರು ತಾಲೂಕಿನಲ್ಲಿ ಉಪ್ಪಿನಂಗಡಿಯ ಸಮೀಪ ನೇತ್ರಾವತಿ ಬಳಿ 6 ಎಕ್ರೆಯಲ್ಲಿ ಮರಳು ಬ್ಲಾಕ್ ಜಾಗ ಗೊತ್ತುಪಡಿಸಿದ್ದು, ಜಲ್ಲಿ ಸಹಿತವಾದ 42 ಸಾವಿರ ಮೆಟ್ರಿಕ್ ಟನ್ ಮರಳಿದೆ. ಇದರಲ್ಲಿ 25 ಸಾವಿರ ಮೆಟ್ರಿಕ್ ಟನ್ ಗುಣಮಟ್ಟದ ಮರಳೆಂದು ಅಂದಾಜಿಸಲಾಗಿದೆ. ಮ್ಯಾಪಿಂಗ್ ಹಾಗೂ ಸರ್ವೇ ನಂಬರ್ ವ್ಯತ್ಯಾಸವಿರುವುದರಿಂದ ಅದು ಸರಿಯಾಗಿ ಬಂದ ಬಳಿಕವೇ ಜಿಲ್ಲಾಡಳಿತಕ್ಕೆ ಕಳಹಿಸಲಾಗುವುದು. ಮರಳು ಬ್ಲಾಕ್ ವರ್ಕ್ ಆರ್ಡರ್ ಆದ ಮೇಲೆ ಸರ್ವೇ ನಂಬರ್ ಬದಲಾವಣೆಯಾಗಿದೆ ಎಂಬ ದೂರು ಬರದಂತೆ ಆರಂಭದಲ್ಲೇ ಎಚ್ಚರ ವಹಿಸಬೇಕು ಎಂದು ಸಹಾಯಕ ಆಯುಕ್ತರು ಹೇಳಿದರು.





















































 
 

ಸುಳ್ಯ ತಾಲೂಕಿನಲ್ಲಿ 2 ಎಕ್ರೆ ಜಾಗ ಗುರುತಿಸಲಾಗಿದ್ದು, 9400 ಮೆಟ್ರಿಕ್ ಟನ್ ಮರಳನ್ನು ಅಂದಾಜಿಸಲಾಗಿದೆ. ಆದರೆ ಸುಳ್ಯದ ಏಕೈಕ ಬ್ಲಾಕ್‌ ಗೆ ಅರಣ್ಯ ಇಲಾಖೆಯ ಆಕ್ಷೇಪವಿದ್ದು, ಇದನ್ನು ಮುಂದುವರಿಸಲು ಅಸಾಧ್ಯ ಎಂದು ಚರ್ಚೆಯ ಬಳಿಕ ಸಭೆ ತೀರ್ಮಾನಿಸಿತು.

ಕಡಬ ತಾಲೂಕು ವ್ಯಾಪ್ತಿಯಲ್ಲಿ 4 ಜಾಗ ಗುರುತಿಸಿದ್ದು, ಗುಂಡ್ಯ ಹೊಳೆ ಬಳಿ 2.5 ಎಕ್ರೆ, ಪೆರಾಬೆಯಲ್ಲಿ 5 ಹಾಗೂ 6 ಎಕ್ರೆ, ಕುದ್ಮಾರು 2.25 ಎಕ್ರೆ ಜಾಗ ಗುರುತಿಸಲಾಗಿದೆ. ಗುಂಡ್ಯ ಬ್ಲಾಕ್ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ೪ ಬ್ಲಾಕ್‌ಗಳಿಗೂ ಭೇಟಿ ನೀಡಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಸೂಚನೆ ನೀಡಿದರು.
ಬೆಳ್ತಂಗಡಿ ತಾಲೂಕಿನಲ್ಲಿ 5 ಬ್ಲಾಕ್‌ ಗಳನ್ನು ಗುರುತಿಸಲಾಗಿದ್ದು, ಮೊಗ್ರುವಿನಲ್ಲಿ 4.40 ಹಾಗೂ 5 ಎಕ್ರೆ, ಬಂದಾರು 4 ಎಕ್ರೆ, ಇಳಂತಿಲ 10 ಎಕ್ರೆ, ಚಿಬಿದ್ರೆಯಲ್ಲಿ 1.50 ಎಕ್ರೆ ಜಾಗ ಗುರುತಿಸಲಾಗಿದೆ. ಇದರಲ್ಲಿ ಇಳಂತಿಲದಲ್ಲಿ ಗುರುತಿಸಲಾದ ಜಾಗದ ಸರ್ವೇ ನಂಬರ್ ಹಾಗೂ ವಿಸ್ತೀರ್ಣ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ವಾರದಲ್ಲಿ ಸರಿಪಡಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಮರಳಿನ ಕೊರತೆಯಿದೆ ಎಂಬ ಕೂಗಿನ ಹಿನ್ನೆಲೆಯಲ್ಲಿ ಹಿಂದೆ ಗುರುತಿಸಿದ ಸಂಪಾಜೆ, ಚಿಬಿದ್ರಿ ಕಡತವನ್ನು ಪುಟಪ್ ಮಾಡಿ ಮುಂದಿನ ಸಭೆಯಲ್ಲಿ ನೀಡುವಂತೆ ಎಸಿಯವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪುತ್ತೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸುಳ್ಯದ ರಾಜಣ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತ ಶೆಟ್ಟಿ, ವಲಯ ಅರಣ್ಯಧಿಕಾರಿಗಳಾದ ಸಂಧ್ಯಾ, ಕಿರಣ್ ಬಿ.ಎಂ., ತ್ಯಾಗರಾಜ್, ಆರ್.ಟಿ.ಒ. ವಿಶ್ವನಾಥ ಅಜಿಲ, ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಪುತ್ತೂರು ಪ್ರಭಾರ ತಹಶೀಲ್ದಾರ್ ನಾಗರಾಜ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ, ಕಡಬದ ಪ್ರಭಾಕರ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ರೈ ಸೇರಿದಂತೆ ಗಣಿ ಇಲಾಖೆ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಉಪವಿಭಾಗದ ತಾಲೂಕುಗಳ ಮರಳು ಸಮಿತಿಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top