4500ಕ್ಕೂ ಅಧಿಕ ಉದ್ದಿಮೆ ನಕಲಿ ಸರ್ಟಿಫಿಕೆಟ್ ಸೃಷ್ಟಿಸಿರುವ ಅನುಮಾನ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯಲ್ಲಿ ದಿನಕ್ಕೊಂದು ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಗರಪಾಲಿಕೆ ನೀಡುವ ಪ್ರಮಾಣಪತ್ರವನ್ನೇ ನಕಲಿಯಾಗಿ ಸೃಷ್ಟಿಸಿ ತೆರಿಗೆ ವಂಚಿಸಿದ ಪ್ರಕರಣ ಬಯಲಾಗಿದ್ದು, ಇದರ ಹಿಂದೆ ಬೃಹತ್ ಜಾಲ ಇರುವ ಅನುಮಾನ ವ್ಯಕ್ತವಾಗಿದೆ.
ನಕಲಿ ತೆರಿಗೆ ನೋಂದಣಿ ಜಾಲವೊಂದು ಇದರ ಹಿಂದೆ ಇದೆ ಎನ್ನಲಾಗಿದೆ. ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ ಮಾಡಲಾಗಿದೆ. ಮಹಾನಗರ ಪಾಲಿಕೆ ನೀಡುವ ಸರ್ಟಿಫಿಕೇಟ್ನ್ನೇ ವಂಚಕರು ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಕಲಿ ಮಾಡಿ ವಂಚಿಸಿದ್ದಾರೆ. ಉದ್ದಿಮೆದಾರರಿಂದ ಹಣ ಸಂಗ್ರಹಿಸಿ ಪಾಲಿಕೆಗೆ ಕಟ್ಟದೆ ಕೆಲ ಏಜೆಂಟರು ದೋಖಾ ಮಾಡಿದ್ದಾರೆ. ಈ ಕುರಿತು ನಗರಪಾಲಿಕೆಯೇ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ಈ ನಕಲಿ ಸರ್ಟಿಫಿಕೇಟ್ ಮೇಲ್ನೋಟಕ್ಕೆ ನೋಡಿದರೆ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಆದರೆ ಕೆಲ ಸರ್ಟಿಫಿಕೇಟ್ನಲ್ಲಿ ಯಾರದ್ದೋ ಕ್ಯೂ ಆರ್ ಕೋಡ್ ಬಳಕೆ ಮಾಡಲಾಗಿದ್ದು, ಸ್ಕ್ಯಾನ್ ಮಾಡಿದಾಗ ಬೇರೆ ಉದ್ದಿಮೆದಾರರ ಪರವಾನಗಿ ಪತ್ರ ಲಭ್ಯವಾಗುತ್ತಿದೆ. ಅತ್ತ ಉದ್ದಿಮೆದಾರರು ಇದೇ ಮೂಲ ಪ್ರತಿ ಎಂದು ನಂಬಿದ್ದಾರೆ.
ಕೆಲ ಸರ್ಟಿಫಿಕೇಟ್ಗಳಲ್ಲಿ ಪರವಾನಗಿ ನವೀಕರಣದ ದಿನಾಂಕಗಳಷ್ಟೇ ಬದಲಾವಣೆ ಮಾಡಲಾಗಿದೆ. ಸುಮಾರು 4,500 ಉದ್ದಿಮೆ ಪರವಾನಗಿಯನ್ನು ನಕಲಿ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ನಕಲಿ ಸರ್ಟಿಫಿಕೆಟ್ ನೀಡಿ ವಂಚಿಸಿರುವ ಬಗ್ಗೆ ಅನುಮಾನಗಳು ಮೂಡಿದ್ದು, ಸರ್ಟಿಫಿಕೆಟ್ಗಳ ಪರಿಶೀಲನೆಗೆ ಪಾಲಿಕೆ ಆಯುಕ್ತ ಸಿಬ್ಬಂದಿಗೆ ಸೂಚಿಸಿದ್ದಾರೆ.
ವಂಚನೆಗೊಳಗಾದವರಿಂದ ಮಂಗಳೂರು ಮಹಾನಗರ ಪಾಲಿಕೆಗೆ ಮಧ್ಯವರ್ತಿ ಪೃಥ್ವಿರಾಜ್ ಶೆಟ್ಟಿ ಎಂಬವರ ವಿರುದ್ಧ ದೂರು ನೀಡಲಾಗಿದೆ. ಕೊಡಲೇ ಎಚ್ವೆತ್ತುಕೊಂಡ ಪಾಲಿಕೆ ಕೂಡ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇಬ್ಬರು ವ್ಯಕ್ತಿಗಳು ಕಚೇರಿಗೆ ಬಂದು ದೂರು ನೀಡಿದ್ದಾರೆ. ಅವರ ಹೆಸರಿನಲ್ಲಿ ಪೃಥ್ವಿರಾಜ್ ಶೆಟ್ಟಿ ಎಂಬ ವ್ಯಕ್ತಿ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿರುವ ಬಗ್ಗೆ ಹೇಳಿದ್ದಾರೆ. ಅವರು ನೀಡಿದ ಹಣ ದುರುಪಯೋಗ ಮಾಡಿ ನಕಲಿ ಸರ್ಟಿಫಿಕೇಟ್ ನೀಡಿದ್ದಾರೆ. ಮೇಲ್ನೋಟಕ್ಕೆ ಪರಿಶೀಲನೆ ಮಾಡಿದಾಗ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ನಕಲಿ ಮಾಡಿರೋದು ಗೊತ್ತಾಗಿದೆ. ಈ ಬಗ್ಗೆ ನಮ್ಮ ವಲಯ ಆಯುಕ್ತರಿಗೆ ದೂರು ದಾಖಲಿಸಲು ಸೂಚಿಸಲಾಗಿದೆ ಎಂದು ಮಹಾನಗರ ಪಾಲಿಕೆ ಕಮಿಷನರ್ ರವೀಂದ್ರ ನಾಯಕ್ ಹೇಳಿದ್ದಾರೆ.
ಇನ್ನೂ ಹೆಚ್ಚಿನ ಉದ್ದಿಮೆ ಪರವಾನಗಿ ತಿದ್ದುಪಡಿಯಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲು ಸಿಬ್ಬಂದಿಗೆ ಸೂಚಿಸಿದ್ದೇನೆ. ಸುಮಾರು 4,500 ಉದ್ದಿಮೆ ಪರವಾನಗಿ ನವೀಕರಣ ಆಗಲು ಬಾಕಿ ಇದೆ. ಅದನ್ನ ಪರಿಶೀಲನೆ ಮಾಡಿದರೆ ನಕಲಿ ಆಗಿರುವ ಸಾಧ್ಯತೆ ಗೊತ್ತಾಗುತ್ತೆ. ಉದ್ದಿಮೆದಾರರು ತಮ್ಮ ಪರವಾನಗಿ ಸರ್ಟಿಫಿಕೇಟ್ ಅನ್ನು ಕೂಡಲೇ ಪರಿಶೀಲನೆ ಮಾಡಬೇಕು. ಏನೇ ಸಮಸ್ಯೆ ಇದ್ದರೂ ಪಾಲಿಕೆಗೆ ಬಂದು ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.
























