ಸಿಮೆಂಟ್ ಕಾರ್ಖಾನೆಯ ಮೇಲೆ ದಾಳಿ ಮಾಡಿ ಕಿಡ್ನ್ಯಾಪ್
ನವದೆಹಲಿ: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಅಲ್ ಖೈದಾ ಉಗ್ರರು ಮೂವರು ಭಾರತೀಯರನ್ನು ಅಪಹರಿಸಿದ್ದಾರೆ. ಈ ಘಟನೆ ಬಗ್ಗೆ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿ ಅವರನ್ನು ಕೂಡಲೇ ರಕ್ಷಣೆ ಮಾಡುವಂತೆ ಮಾಲಿ ಸರ್ಕಾರದ ಬಳಿ ಮನವಿ ಮಾಡಿದೆ.
ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜುಲೈ 1ರಂದು ಕೆಲವು ಶಸ್ತ್ರಸಜ್ಜಿತ ದಾಳಿಕೋರರು ಮಾಲಿಯ ಕೇಯ್ಸ್‌ನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಯ ಮೇಲೆ ದಾಳಿ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ನಾಗರಿಕರನ್ನು ಅಪಹರಿಸಿದ್ದಾರೆ.
ಮಾಲಿಯಲ್ಲಿ ನಡೆದ ಈ ಅಪಹರಣ ಮತ್ತು ಇತರ ದಾಳಿಗಳ ಹೊಣೆಯನ್ನು ಅಲ್ ಖೈದಾ ಜೊತೆ ಸಂಬಂಧ ಹೊಂದಿರುವ ಜಮಾತ್ ನುಸ್ರತ್ ಅಲ್ ಇಸ್ಲಾಂ ವಾಲ್ ಮುಸ್ಲಿಮೀನ್ (ಜೆಎನ್‌ಐಎಂ) ಹೊತ್ತುಕೊಂಡಿದೆ. ಮಾಲಿಯ ರಾಜಧಾನಿ ಬಮಾಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಆಡಳಿತ, ಕಾನೂನು ಜಾರಿ ಸಂಸ್ಥೆಗಳು ಮತ್ತು ಸಿಮೆಂಟ್ ಕಾರ್ಖಾನೆ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಾಲಿಯಲ್ಲಿ ವಾಸಿಸುವ ಇತರ ಭಾರತೀಯರು ಜಾಗರೂಕರಾಗಿರಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ ಎಂದು ಸರ್ಕಾರ ಸೂಚಿಸಿದೆ. ಇಸ್ಲಾಮಿಸ್ಟ್ ದಂಗೆ ಮತ್ತು ಟುವಾರೆಗ್ ದಂಗೆಯಿಂದಾಗಿ ಮಾಲಿ 2012ರಿಂದ ಅಸ್ಥಿರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿವೆ.
























