ಕೊಲೆ, ಹತ್ಯಾಯತ್ನ ಪ್ರಕರಣದ ಆರೋಪಿಗಳು
ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತ ಎಂಬಾತನನ್ನು ಮೂಲ್ಕಿ ಸಮೀಪ ಪಕ್ಷಕೆರೆಯಲ್ಲಿ ಬಂಧಿಸಲಾಗಿದೆ.
ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತ 2020ರಲ್ಲಿ ಮುಲ್ಕಿ ಹೆದ್ದಾರಿಯ ಬಳಿ ವಿಜಯ ಸನ್ನಿಧಿ ಎದುರು ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ. ಆದರೆ, ಏಪ್ರಿಲ್ 22, 2022ರಂದು ಸುಪ್ರೀಂ ಕೋರ್ಟ್ ಆರೋಪಿಯ ಜಾಮೀನು ರದ್ದುಗೊಳಿಸಿತ್ತು. ನಂತರ ಮೊಹಮ್ಮದ್ ಮುಸ್ತಫಾ ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದ. ಜೂನ್ 5, 2020ರಂದು ಮೂಲ್ಕಿಯಲ್ಲಿ ಹಾಡಹಗಲೇ ಸಂಭವಿಸಿದ ಅಬ್ದುಲ್ ಲತೀಫ್ ಎಂಬವರ ಕೊಲೆಯಲ್ಲಿ ಮುಸ್ತಫಾ ಭಾಗಿಯಾಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಸ್ತುತ ವಿಚಾರಣೆಯಲ್ಲಿದೆ.
ಮುಸ್ತಫಾ ನಕಲಿ ದಾಖಲೆಗಳನ್ನು ಬಳಸಿ ಒಮಾನ್‌ಗೆ ಪರಾರಿಯಾಗಿ, ಏಪ್ರಿಲ್ 2024ರಲ್ಲಿ ನೇಪಾಳ ಮೂಲಕ ಅಕ್ರಮವಾಗಿ ಭಾರತಕ್ಕೆ ಮರಳಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಶೇಷ ಪೊಲೀಸ್ ತಂಡ ಜೂನ್ 30ರಂದು ಮೂಲ್ಕಿಯ ಪಕ್ಷಿಕೆರೆ ಎಂಬ ಆತನ ಹುಟ್ಟೂರು ಬಳಿ ಪತ್ತೆಹಚ್ಚಿ ಬಂಧಿಸಿದೆ. ಮಂಗಳೂರು, ಚಿಕ್ಕಮಗಳೂರು ಮತ್ತು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆತನ ವಿರುದ್ಧ ಒಟ್ಟು ಒಂಬತ್ತು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಂಟ್ವಾಳದ ಬಿ ಮೂಡ ಗ್ರಾಮ ನಿವಾಸಿ ಅಕ್ಬರ್ ಸಿದ್ದಿಕ್ ಎಂಬಾತನನ್ನು ಜೂನ್ 30ರಂದು ಬಂಧಿಸಲಾಗಿದೆ. 2011ರಲ್ಲಿ ಬಂಟ್ವಾಳ ತುಂಬೆ ಗ್ರಾಮದ ಅರ್ಬನಗುಡ್ಡೆ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆರೋಪಿ ಅಕ್ಬರ್ ಸಿದ್ದಿಕ್ ತಲೆಮರೆಸಿಕೊಂಡಿದ್ದ.
























