ದಾವಣಗೆರೆ: ಕೂರುವುದಕ್ಕೆ ಸ್ವಂತ ಸೂರು ಇಲ್ಲದಿದ್ದರೂ ಅಂಗನವಾಡಿಗೆ ಒಂದು ಗುಂಟೆ ಜಮೀನು ಬಿಟ್ಟುಕೊಡುವ ಮೂಲಕ ವೃದ್ಧೆಯೋರ್ವರು ಶಿಕ್ಷಣ ಪ್ರೇಮ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದ ಸುಶೀಲಮ್ಮ ಎಂಬವರೇ ಹೃದಯ ಶ್ರೀಮಂತಿಕೆ ಮೆರೆದ ವೃದ್ಧೆ. ತಮ್ಮ ವಾಸ ಬಾಡಿಗೆ ಮನೆಯಲ್ಲಾದರೂ ತಮಗಿದ್ದ ಒಂದು ಗುಂಟೆ ಜಮೀನನ್ನು ಅಂಗನವಾಡಿಗಾಗಿ ಬಿಟ್ಟುಕೊಟ್ಟಿದ್ದಾರೆ. ಬಾಡಿಗೆ ಕಟ್ಟಡದಲ್ಲಿನ ಅಂಗನವಾಡಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದನ್ನು ಕಂಡು ಮರುಗಿದ ಸುಶೀಲಮ್ಮ ಅವರ ಮನಸ್ಸು, ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಜಮೀನು ದಾನ ನೀಡಿರುವುದಾಗಿದೆ.
ಸದ್ಯ ಸುಶೀಲಮ್ಮ ಅವರು ದಾನ ನೀಡಿದ ಕಟ್ಟಡದಲ್ಲಿ ಸರ್ಕಾರ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದು, ಆ ಮೂಲಕ ಅವರ ದಾನಕ್ಕೆ ಸೂಕ್ತ ಮರ್ಯಾದೆ ನೀಡಿದೆ. ಈ ಕಟ್ಟಡವನ್ನು ನೋಡಿ ಸುಶೀಲಮ್ಮ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
























