ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ತಿರುಚಿ ತೇಜೋವಧೆ ಎಂದು ಸ್ಪಷ್ಟನೆ
ಬೆಂಗಳೂರು: ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪದೇ ಪದೆ ಮುಜುಗರವುಂಟು ಮಾಡುತ್ತಿರುವ ಆಳಂದದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ನಿನ್ನೆ ಸಿದ್ದರಾಮಯ್ಯ ಲಾಟರಿ ಸಿಎಂ ಎಂದು ಹೇಳಿದ್ದು ಭಾರಿ ವೈರಲ್ ಆಗಿದೆ. ಫೋನ್‌ನಲ್ಲಿ ಯಾರ ಜೊತೆಗೋ ಮಾತನಾಡುತ್ತಾ ಬಿ.ಆರ್ ಪಾಟೀಲ್ ಏಕವಚನದಲ್ಲೇ ಸಿದ್ದರಾಮಯ್ಯ ಲಕ್ಕಿ, ಸಿಎಂ ಲಾಟರಿ ಹೊಡೆದುಬಿಟ್ಟರು ಎಂಬ ಹೇಳಿದ್ದರು. ಇದರಿಂದ ಪಕ್ಷಕ್ಕೆ ಮತ್ತು ಸಿದ್ದರಾಮಯ್ಯನವರಿಗೆ ತೀವ್ರ ಮುಜುಗರವಾಗಿದ್ದು, ಕೂಡಲೇ ಇದಕ್ಕೆ ಸ್ಪಷ್ಟನೆ ಕೊಟ್ಟ ಪಾಟೀಲ್ ಇದು ನನ್ನ ಹಾಗೂ ಸಿದ್ದರಾಮಯ್ಯರ ನಡುವಿನ ಸಂಬಂಧ ಹಾಳು ಮಾಡಲು ಮಾಡಿರುವ ಕೆಲಸ ಎಂದು ಗೂಬೆ ಕೂರಿಸಿದ್ದಾರೆ.
ಎಲೆಕ್ಟ್ರಾನಿಕ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ನನ್ನ ಹೇಳಿಕೆಯನ್ನು ತಿರುಚಿ, ತೇಜೋವಧೆ ಮಾಡುವಂತಹ ಕೆಲಸ ಮಾಡುವುದು ಸರಿಯಲ್ಲ. ನಾನು ಕೆ.ಆರ್. ಪೇಟೆಯಲ್ಲಿ ಆತ್ಮೀಯರ ಜೊತೆ ಮಾತನಾಡುವಾಗ ಸಿದ್ದರಾಮಯ್ಯ ಅವರ ವಿಷಯ ಪ್ರಸ್ತಾಪ ಆದಾಗ, ಅವರ ಬಗ್ಗೆ ಮಾತನಾಡಿದ್ದೇನೆ. ಅವರಿಗೆ ಲಕ್ಕಿ ಲಾಟರಿ ಇತ್ತು ಸಿಎಂ ಆದ್ರು ಎಂದಿದ್ದೆ. ನಾನು ಸೋನಿಯಾ ಗಾಂಧಿಯನ್ನು ಭೇಟಿ ಮಾಡ್ಸಿದ್ದೇನೆ ಅಂದಿರೋದು ಸಂಪೂರ್ಣ ತಪ್ಪು. ಸೋನಿಯಾ ಗಾಂಧಿಯನ್ನು ಭೇಟಿ ಮಾಡುವಾಗ ನಾನು ಜೊತೆಗಿದ್ದೆ. ಈ ಸಲ ಭೇಟಿ ಬೇಡ ಅಂದಿದ್ದಾಗ, ನಾನೇ ಒತ್ತಾಯ ಮಾಡಿದ್ದೆ, ಭೇಟಿ ಮಾಡಿ ಎಂದಾಗ ಅವರು ಹೋಗಿದ್ದರು ಎಂದರು.
ಸಿದ್ದರಾಮಯ್ಯ ಮಾಸ್ ಲೀಡರ್. ಅವರನ್ನು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ಅವರು ಮತ್ತು ನನ್ನ ನಡುವಿನ ಆತ್ಮೀಯ ಸಂಬಂಧ ಹಾಳು ಮಾಡುವುದಕ್ಕೆ ಕೆಲವರು ಉದ್ದೇಶಪೂರ್ವಕ ಪ್ರಯತ್ನಿಸುತ್ತಿದ್ದಾರೆ. ನಾವು 9 ಜನ ಶಾಸಕರು ಜೆಡಿಎಸ್ ಬಿಟ್ಟು ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸೇರಿದ್ದೆವು. ಕಾಂಗ್ರೆಸ್ ಕೂಡ ಅವರ ಜನಬೆಂಬಲ ನೋಡಿ ಅವರನ್ನು ಮುಖ್ಯಮಂತ್ರಿ ಮಾಡಿದೆ ಹೊರತಾಗಿ ನಾವು ಹೇಳಿದ್ರಿಂದ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ವಸತಿ ಯೋಜನೆಗಳಲ್ಲಿ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ಬಹಿರಂಗಪಡಿಸುವ ಮೂಲಕ ಬಿ.ಆರ್.ಪಾಟೀಲ್ ಏಕಾಏಕಿ ಸುದ್ದಿಯಲ್ಲಿದ್ದಾರೆ. ಅನಂತರ ಸರಣಿಯಾಗಿ ಅವರು ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ಧ ದಾಳಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ನಿನ್ನೆ ಅವರನ್ನು ಕರೆಸಿ ಸುಮಾರು ಮುಕ್ಕಾಲು ತಾಸು ಮಾತನಾಡಿದ್ದಾರೆ.
ವಸತಿ ಹಗರಣದ ಆಡಿಯೋ ಬಯಲಾದ ಬಳಿಕ ನಿನ್ನೆ ಬಿ.ಆರ್. ಪಾಟೀಲ್ ಹೇಳಿರುವ ಸಿದ್ದರಾಮಯ್ಯ ಲಕ್ಕಿ. ಲಾಟರಿ ಹೊಡೆದುಬಿಟ್ಟರು. ನಾನೇ ಜತೆಗೆ ಹೋಗಿ ಸೋನಿಯಾ ಗಾಂಧಿ ಭೇಟಿ ಮಾಡಿಸಿದ್ದೆ. ಹಣೆಬರಹ ಚೆನ್ನಾಗಿತ್ತು, ಸಿಎಂ ಆದರು. ನನ್ನ ಗ್ರಹಚಾರ… ಗಾಡ್ ಇಲ್ಲ, ಪಾದರೂ ಇಲ್ಲ… ’’ ಎಂದು ಗೋಳಾಡಿಕೊಳ್ಳುವ ವಿಡಿಯೋ ವೈರಲ್ ಆಗಿತ್ತು.
ಕೆ.ಆರ್.ಪೇಟೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕೊಠಡಿಯೊಂದರಲ್ಲಿ ಕುಳಿತು ಪಾಟೀಲ್ ಮೊಬೈಲ್‌ನಲ್ಲಿ ಮಾತನಾಡುವುದು ವಿಡಿಯೋದಲ್ಲಿದೆ. ಸಿದ್ದರಾಮಯ್ಯ ಅವರ ಬಗ್ಗೆ ಪಾಟೀಲ್ ಏಕವಚನದಲ್ಲೇ ಮಾತನಾಡುವ ಈ ವಿಡಿಯೋ ವೈರಲ್ ಆಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ‘ಹೌದು ನಾನು. ಅದೃಷ್ಟದ ಮುಖ್ಯಮಂತ್ರಿ. ನಾನು ಮತ್ತು ಪಾಟೀಲ್ ಒಟ್ಟಿಗೆ ಶಾಸಕರಾಗಿದ್ದು, ಅದಕ್ಕೇ ಹೇಳಿರಬಹುದು ಗೊತ್ತಿಲ್ಲ. ಅವರನ್ನು ಕರೆಸಿ ಮಾತಾಡುತ್ತೇನೆ ಎಂದು ಹೇಳಿದ್ದಾರೆ.
























