ಪ್ರಯಾಣಿಕರಿಗೆ ಅನುಕೂಲವಾಗುವ ಸೂಪರ್ ಆ್ಯಪ್
ನವದೆಹಲಿ: ಭಾರತೀಯ ರೈಲ್ವೆ ರೈಲ್ ಒನ್ ಎಂಬ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ರೈಲ್ವೆ ಪ್ರಯಾಣಿಕರ ಎಲ್ಲ ಅಗತ್ಯಗಳನ್ನು ಪೂರೈಸಬಲ್ಲ ಸೂಪರ್ ಆ್ಯಪ್ ಇದು. ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್ನ 40ನೇ ಸಂಸ್ಥಾಪನಾ ದಿನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ ಒನ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ರೈಲ್ ಒನ್ ಆ್ಯಪ್ ಆಂಡ್ರಾಯ್ಡ್ ಮತ್ತು ಆ್ಯಪಲ್ ಪ್ಲಾಟ್ಫಾರ್ಮ್ ಎರಡರಲ್ಲೂ ಲಭ್ಯ ಇದೆ. ರೈಲ್ವೆಗೆ ಸಂಬಂಧಿತ ಯಾವುದೇ ಮಾಹಿತಿಯನ್ನು ಪಡೆಯಲು ಹಾಗೂ ಪ್ರಯಾಣಿಕರಿಗೆ ಅಗತ್ಯವಾಗಿರುವ ಯಾವುದೇ ಸೇವೆಯನ್ನು ಪಡೆಯಲು ಈ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಐಆರ್ಸಿಟಿಸಿ, ರೈಲ್ಕನೆಕ್ಟ್, ಯುಟಿ ಸನ್ ಮೊಬೈಲ್, ರೈಲ್ ಮದದ್ ಇತ್ಯಾದಿ ವಿವಿಧ ಪೋರ್ಟಲ್ಗಳು ನೀಡುವ ಸೇವೆಗಳನ್ನು ರೈಲ್ ಒನ್ ಆ್ಯಪ್ ಒಂದರಲ್ಲೇ ಪಡೆಯಬಹುದು. ಭಾರತೀಯ ರೈಲ್ವೆ ಇಲಾಖೆ ಇದೀಗ ಎಲ್ಲ ಸೇವೆಗಳು ಒಂದೇ ಸೂರಿನಡಿ ಲಭಿಸುವಂತೆ ಮಾಡಿದೆ.
ಈ ಆ್ಯಪ್ ಮೂಲಕ ಟಿಕೆಟ್ ಬುಕಿಂಗ್, ಪಿಎನ್ಆರ್ ಟ್ರ್ಯಾಕಿಂಗ್, ಆಹಾರ ಆರ್ಡರ್ ಸೇರಿದಂತೆ ಹಲವು ಸೇವೆಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಲ್ಲದೇ ಐಆರ್ಸಿಟಿಸಿ ರೈಲು ಟಿಕೆಟ್ಗಳನ್ನು ಕಾಯ್ದಿರಿಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಸ್ಟೋರ್ಗಳಲ್ಲಿ ಈ ಆಪ್ ಡೌನ್ಲೋಡ್ಗೆ ಲಭ್ಯವಿದೆ.
ರೈಲ್ವೆಯ ಕೋಟ್ಯಂತರ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ. ಭಾರತೀಯ ರೈಲ್ವೆಗೆ ಸಂಬಂಧಿಸಿದ ಎಲ್ಲ ಅಗತ್ಯಗಳನ್ನು ಒಂದೇ ಜಾಗದಲ್ಲಿ ಪೂರೈಸುವ ಗುರಿಯೊಂದಿಗೆ ಈ ರೈಲ್ಒನ್ ಎಂಬ ಹೊಸ ಸೂಪರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.
ಐಆರ್ಸಿಟಿಸಿ ಕಾಯ್ದಿರಿಸಿದ, ಕಾಯ್ದಿರಿಸದ ಮತ್ತು ಪ್ಲ್ಯಾಟ್ಫಾರ್ಮ್ ಟಿಕೆಟ್ ಬುಕ್ ಮಾಡುವುದು, ಪಿಎನ್ಆರ್ ಮತ್ತು ರೈಲಿನ ಸ್ಥಿತಿಯನ್ನು ಪರಿಶೀಲಿಸುವುದು, ಕೋಚ್ ಸಂಖ್ಯೆ, ರೈಲ್ವೆ ಸಹಾಯ ಮತ್ತು ಪ್ರಯಾಣಿಕರ ಪ್ರತಿಕ್ರಿಯೆಯನ್ನು ಈ ಆ್ಯಪ್ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ.
ಸದ್ಯ ಭಾರತೀಯ ರೈಲ್ವೆ ಪ್ರಯಾಣಿಕರು ಬೇರೆ ಬೇರೆ ಸೇವೆಗಳಿಗೆ ಬೇರೆ ಬೇರೆ ಅಪ್ಲಿಕೇಶನ್ ಲಾಗಿನ್ ಆಗಬೇಕಾಗುತ್ತದೆ. ಅಲ್ಲದೇ ಕೆಲವೊಂದು ವೆಬ್ಸೈಟ್ಗಳಿಗೆ ಭೇಟಿ ನೀಡಬೇಕು. ಟಿಕೆಟ್ಗಳನ್ನು ಕಾಯ್ದಿರಿಸಲು ಐಆರ್ಸಿಟಿಸಿ ರೈಲ್ ಕನೆಕ್ಟ್, ಐಆರ್ಸಿಟಿಸಿ ಇ-ಕ್ಯಾಟರಿಂಗ್ ಫುಡ್ ಆನ್ ಟ್ರ್ಯಾಕ್, ಕಾಯ್ದಿರಿಸದ ಟಿಕೆಟ್ಗಳನ್ನು ಖರೀದಿಸಲು ಯುಟಿಎಸ್ ಮತ್ತು ರೈಲು ಎಲ್ಲಿದೆ ಎಂದು ನೋಡಲು ನ್ಯಾಷನಲ್ ಟ್ರೈನ್ ಎನ್ಕ್ವೈರಿ ಸಿಸ್ಟಂ ಬಳಸಲಾಗುತ್ತಿದೆ.
ಈ ಆ್ಯಪ್ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ mPIN ಮತ್ತು ಬಯೋಮೆಟ್ರಿಕ್ ದೃಢೀಕರಣದಂತಹ ಸರಳ ಲಾಗಿನ್ ಆಯ್ಕೆಗಳನ್ನು ಹೊಂದಿದೆ. ಹೊಸ ಬಳಕೆದಾರರಿಗೆ ಕನಿಷ್ಠ ಮಾಹಿತಿ ನೀಡುವ ಮೂಲಕ ನೋಂದಣಿ ಮಾಡಲು ಅವಕಾಶವಿದೆ. ನೋಂದಣಿ ಪ್ರಕ್ರಿಯೆ ಸುಲಭ ಮತ್ತು ವೇಗವಾಗಿದೆ.
ರೈಲ್ಒನ್ ಅಪ್ಲಿಕೇಶನ್ನಲ್ಲಿ ‘ಸಿಂಗಲ್ ಸೈನ್ ಆನ್’ ವಿಶೇಷ ಸೌಲಭ್ಯ ಒದಗಿಸಲಾಗಿದೆ. ಇದಕ್ಕಾಗಿ ಬಳಕೆದಾರರು ಬಹು ಪಾಸ್ವರ್ಡ್ಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ರೈಲ್ಒನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ಮೊಬೈಲ್ ಅಪ್ಲಿಕೇಶನ್ನಲ್ಲಿ ರೈಲ್ಕನೆಕ್ಟ್ ಅಥವಾ ಯುಟಿಎಸ್ನ ಅಸ್ತಿತ್ವದಲ್ಲಿರುವ ಬಳಕೆದಾರ ಐಡಿಯೊಂದಿಗೆ ಲಾಗಿನ್ ಮಾಡಬಹುದು. ಈ ಕಾರಣದಿಂದಾಗಿ ಬಳಕೆದಾರರು ವಿಭಿನ್ನ ಸೇವೆಗಳಿಗಾಗಿ ಪ್ರತ್ಯೇಕ ಅಪ್ಲಿಕೇಶನ್ಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.
























