ಬೆಳ್ತಂಗಡಿ : ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅಶ್ಲೀಲ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ ಸಂಬಂಧ ಇಬ್ಬರ ವಿರುದ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಹಾಕಿದ ಆರೋಪದಲ್ಲಿ ನವೀನ್ ಗೌಡ ಎಂಬಾತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯೊಬ್ಬರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Naveen Gowda (https://facebook.com/naveen.gowda.938621) ಎಂಬ ಫೇಸ್ಬುಕ್ ಖಾತೆಯಲ್ಲಿ ಮಹೇಶ್ ಶೆಟ್ಟಿ ಎಂತವರನ್ನು ಸಾಕಿಕೊಂಡಿದ್ದಾನೆ ಎಂದು ಆರಂಭಿಸಿ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಿರುವುದಾಗಿ ದೂರಲಾಗಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿದ್ದಲ್ಲದೆ, ಕಾನೂನನ್ನು ಕೈಗೆತ್ತಿಕೊಳ್ಳುವುದೇ ಉಳಿದಿರುವ ದಾರಿ ಎಂದು ಫೇಸ್ಬುಕ್ನಲ್ಲಿ ಬರೆದಿದ್ದ ʼವಿಜಯ ವಿಜಿʼ ಎಂಬ ಎಂಬ ಫೇಸ್ಬುಕ್ ಖಾತೆಯ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಧರ್ಮಸ್ಥಳ ನಿವಾಸಿ ರಮೇಶ್ ದೊಂಡೋಲೆ ಎಂಬವರು ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ವಿಜಯ ವಿಜಿ ಎಂಬ ಖಾತೆಯಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿರುವುದಲ್ಲದೆ “ಇನ್ನು ಉಳಿದಿರೋ ದಾರಿ ಒಂದೇ ಕಾನೂನು ನಮ್ಮ ಕೈಗೆ ತೆಗೊಳೋದು, ಜೈ ಅಣ್ಣಪ್ಪ ಜೈ ಮಂಜುನಾಥ” ಎಂದು ಬರೆದಿದ್ದಾರೆ ಎಂದು ತಿಳಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (296 BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

