ಸೆ.5ರಿಂದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ : ಟಿ20 ಮಾದರಿಯಲ್ಲಿ ಪಂದ್ಯ

ಮೊದಲ ಸುತ್ತಿನಲ್ಲೇ ಭಾರತ-ಪಾಕಿಸ್ತಾನ ಮುಖಾಮುಖಿ

ನವದೆಹಲಿ : ಏಷ್ಯಾ ಉಪಖಂಡದ ಕ್ರಿಕೆಟ್‌ ರಾಷ್ಟ್ರಗಳ ನಡುವಿನ ಮಿನಿ ಸಮರ ಏಷ್ಯಾಕಪ್‌ ಕೂಟದ ಕರಡು ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಿದ್ಧಪಡಿಸಿದೆ. ಈ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 5ರಿಂದ 17ನೇ ಆವೃತ್ತಿಯ ಏಷ್ಯಾ ಕಪ್ ಶುರುವಾಗಲಿದೆ. ಫೈನಲ್ ಪಂದ್ಯವನ್ನು ಸೆಪ್ಟೆಂಬರ್ 21ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಈ ಬಾರಿಯ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸುವ ಸಾಧ್ಯತೆಯಿದೆ. ಆ ಸಂದರ್ಭದ ಪರಿಸ್ಥಿತಿಯನ್ನು ಹೊಂದಿಕೊಂಡು ಪಂದ್ಯಗಳ ದಿನಾಂಕ ಮತ್ತು ಸ್ಥಳದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಏಷ್ಯಾಕಪ್ 2025ರ ಆಯೋಜನೆಯ ಹಕ್ಕು ಭಾರತೀಯ ಕ್ರಿಕೆಟ್ ಮಂಡಳಿಯ ಕೈಯಲ್ಲಿದೆ. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಬಹಳ ಹದಗೆಟ್ಟಿರುವುದರಿಂದ ಕೂಟವನ್ನು ಬೇರೊಂದು ದೇಶದಲ್ಲಿ ಆಯೋಜಿಸುವ ಸಾಧ್ಯತೆಯೇ ಹೆಚ್ಚಿದೆ. ಭಾರತದಲ್ಲಿ ಪಂದ್ಯವಾಡಲು ಪಾಕಿಸ್ತಾನ ತಂಡ ಆಗಮಿಸುವುದಿಲ್ಲ. ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳಿರಲಿಲ್ಲ. ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಿತ್ತು. ಅದರಂತೆ ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು.





















































 
 

ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ಬಗ್ಗೆ ನಡೆದ ಐಸಿಸಿ ಸಭೆಯಲ್ಲಿ ಬಿಸಿಸಿಐ ಹಾಗೂ ಪಿಸಿಬಿ ನಡುವೆ ಒಪ್ಪಂದವಾಗಿದ್ದು, ಈ ಒಪ್ಪಂದದಂತೆ ಉಭಯ ತಂಡಗಳ ಪಂದ್ಯಗಳನ್ನು ಮುಂಬರುವ ದಿನಗಳಲ್ಲಿ ತಟಸ್ಥ ಮೈದಾನದಲ್ಲಿ ಆಯೋಜಿಸಬೇಕಾಗುತ್ತದೆ. ಭಾರತ ಪಾಕಿಸ್ತಾನದಲ್ಲಿ ಆಡದೆ ಇರುವ ತನಕ, ಪಾಕಿಸ್ತಾನ ತಂಡ ಭಾರತದಲ್ಲಿ ಯಾವುದೇ ಪಂದ್ಯವಾಡುವುದಿಲ್ಲ. ಅದರಂತೆ ಪಾಕಿಸ್ತಾನ ತಂಡದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸುವುದು ಅನಿವಾರ್ಯ. ಇದೇ ಕಾರಣದಿಂದಾಗಿ ಸಂಪೂರ್ಣ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.

ಏಷ್ಯಾಕಪ್ 2025ರ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ. ಸಾಂಪ್ರದಾಯಿಕ ಎದುರಾಳಿಗಳ ಕದನವನ್ನು ಸೆಪ್ಟೆಂಬರ್ 7ರಂದು ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಪಂದ್ಯವು ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಈ ಬಾರಿ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದೆ. ಮುಂಬರುವ ಟಿ20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಟಿ20 ಸ್ವರೂಪದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ಅಂದರೆ ಏಷ್ಯಾಕಪ್​ ನಂತರ ಯಾವುದೇ ಐಸಿಸಿ ಟೂರ್ನಿ ಇದ್ದರೆ, ಅದಕ್ಕನುಗುಣವಾಗಿ ಟೂರ್ನಿಯ ಸ್ವರೂಪವನ್ನು ಬದಲಿಸಲಾಗುತ್ತದೆ.

2023ರಲ್ಲಿ ಏಷ್ಯಾಕಪ್ ಅನ್ನು ಏಕದಿನ ಸ್ವರೂಪದಲ್ಲಿ ಆಡಲಾಗಿತ್ತು. 2023ರ ಏಕದಿನ ವಿಶ್ವಕಪ್ ಅನ್ನು​ ಕೇಂದ್ರೀಕರಿಸಿ ಒಡಿಐ ಸ್ವರೂಪದಲ್ಲಿ ಏಷ್ಯಾಕಪ್​ ಟೂರ್ನಿಯನ್ನು ಆಯೋಜಿಸಲಾಗಿತ್ತು. ಇದೀಗ 2026ರ ಟಿ20 ವಿಶ್ವಕಪ್​ ಹಿನ್ನಲೆಯಲ್ಲಿ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಯುಎಇ ಏಷ್ಯಾಕಪ್‌ ಆಡುವ ತಂಡಗಳು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top