ಚಿಕ್ಕಮಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಮಂಜು ಕವಿಯುತ್ತಿರುವ ಕಾರಣದಿಂದ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಇಲಾಖೆ, ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ದೇಶ ವಿದೇಶಗಳ ಪ್ರವಾಸಿಗರು ಎತ್ತಿನ ಭುಜಕ್ಕೆ ಚಾರಣಕ್ಕೆ ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಸಿಗರಿಗೆ ಅನಾಹುತ ಎದುರಾದರೆ ಅವರನ್ನು ರಕ್ಷಣೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಎತ್ತಿನ ಭುಜದ ಮೇಲ್ಭಾಗಕ್ಕೆ ಯಾವುದೇ ವಾಹನಗಳ ಸಂಚಾರ ಇಲ್ಲ. ಹಾಗಾಗಿ ಪ್ರವಾಸಿಗರಿಗೆ ಅಪಾಯವಾದರೆ ಅವರನ್ನು ಹೊತ್ತುಕೊಂಡೇ ಕೆಳಕ್ಕೆ ತರಬೇಕು. ಈ ಎಲ್ಲಾ ಸಮಸ್ಯೆಗಳ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.
ಮಳೆಗಾಲವಾದ್ದರಿಂದ ಭೂಕುಸಿತದ ಅಪಾಯ ಸಹ ಹೆಚ್ಚು. ಜುಲೈ 1 ರಿಂದ ಜುಲೈ 31 ರ ವರೆಗೆ ಎತ್ತಿನ ಭುಜ ಚಾರಣಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿರುವುದಾಗಿ ಆದೇಶದಲ್ಲಿ ಹೇಳಲಾಗಿದೆ.
























